ಬೀಜಿಂಗ್: ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್ನಲ್ಲೇ ಇರಲು ಇಚ್ಚಿಸುವ ನೌಕರರು ವಾರದಲ್ಲಿ 6 ದಿನ ನಿತ್ಯ 12 ಗಂಟೆ ದುಡಿಯಲೇಬೇಕು ಎಂದು ಕಂಪನಿಯ ಕಾರ್ಯನಿರ್ವಾಹಕ ಅಧ್ಯಕ್ಷ ಜಾಕ್ ಮಾ ಉದ್ಯೋಗಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಅಲಿಬಾಬಾ ಸಂಸ್ಥೆಯ ಆಂತರಿಕ ಸಭೆಯಲ್ಲಿ ಜಾಕ್ ಮಾ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಇಲ್ಲಿನ ಸ್ಥಳೀಯ ಆನ್ಲೈನ್ ಸುದ್ದಿ ಮಾಧ್ಯಮ ಪ್ರಕಟಿಸಿದೆ. 'ಎಂಟು ಗಂಟೆಗಳ ಕಚೇರಿ ಕೆಲಸದ ಸಂಸ್ಕೃತಿ ಇರಿಸಿಕೊಂಡು ಬರುವ ಜನರ ಅಗತ್ಯತೆ ಅಲಿಬಾಬಾ ಗ್ರೂಪ್ಗೆ ಇಲ್ಲ ಎಂದು ಅವರು ಎಚ್ಚರಿಸಿದ್ದಾರೆ. ಇದರ ಬದಲಾಗಿ, 996 ದುಡಿಮೆ ಸಂಸ್ಕೃತಿ ಅಳವಡಿಸಿಕೊಳ್ಳುವಂತೆ ( ಅಂದರೆ, ನಿತ್ಯ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆ, ವಾರಕ್ಕೆ ಆರು ದಿನಗಳ ಕಾಲದ ಕೆಲಸ) ಉದ್ಯೋಗಿಗಳಿಗೆ ಆದೇಶ ಕೊಟ್ಟಿದ್ದಾರೆ.
996 ಸಂಸ್ಕೃತಿಯಡಿ ಕೆಲಸ ಮಾಡಲು ಸಾಧ್ಯವಾದರೆ ಅದು ಭಾರಿ ಆನಂದದಾಯಕ. ನೀವು ಅಲಿಬಾಬಾದಲ್ಲಿ ಸೇರಲು ಬಯಸಿದರೆ, ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಲು ಸಿದ್ಧರಾಗಿರಬೇಕು. ಇಲ್ಲದಿದ್ದರೆ ಅಲಿಬಾಬಾ ಸೇರಬಯಸುವ ಯೋಚನೆ ಬಿಟ್ಟುಬಿಡಿ ಎಂದು ಚೀನಾದ ಶ್ರೀಮಂತ ಉದ್ಯಮಿ ಹೇಳಿದ್ದಾರೆ.
ಅಲಿಬಾಬಾ ಕಂಪನಿಯ ಈ ನೀತಿಗೆ ಉದ್ಯಮ ವಲಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿವೆ. 'ಇದು ಅಸಂಬದ್ಧತೆಯ ಹೊರೆ. ಕಂಪೆನಿಯು 996 ದುಡಿಮೆ ಸಂಸ್ಕೃತಿಯಿಂದ ಅಧಿಕ ಸಮಯದ ಕೆಲಸಕ್ಕೆ ಹೆಚ್ಚಿನ ಹಣ ಒದಗಿಸುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ನೀಡಿಲ್ಲ. ಜನರು ತಮ್ಮ ಸ್ವಂತ ತರ್ಕಕ್ಕಿಂತ ಕಾನೂನುಗಳಿಗೆ ಅಂಟಿಕೊಳ್ಳಬಹುದೆಂದು ಭಾವಿಸಿದ್ದೇನೆ' ಎಂದು ಚೀನಾದ ಉದ್ಯಮ ತಜ್ಞರೊಬ್ಬರು ಜಾಕ್ ನಡೆಯನ್ನು ಟೀಕಿಸಿದ್ದಾರೆ.
ಜಾಕ್ ಮಾ ಅವರ ಹೇಳಿಕೆ ಹೊರಬೀಳುತ್ತಿದ್ದಂತೆ ಚೀನಾದಲ್ಲಿನ ಕಂಪ್ಯೂಟರ್ ಪ್ರೋಗ್ರಾಮರ್ಗಳು ಕಾರ್ಮಿಕರ ಸ್ಥಿತಿಗತಿ ಸುಧಾರಣೆ ಕುರಿತು '996' ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದರು.