ಬರ್ಲಿನ್: ಆಸ್ಪತ್ರೆಗೆ ದಾಖಲಾದ ಕೋವಿಡ್ ರೋಗಿಗಳ ಮೇಲೆ ಮಲೇರಿಯಾ ಔಷಧ ಹೈಡ್ರೋಕ್ಲೋರೋಕ್ವಿನ್ ಪ್ರಯೋಗವನ್ನು ನಿಲ್ಲಿಸುತ್ತಿದ್ದೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್ಒ) ತಿಳಿಸಿದೆ.
ಕೋವಿಡ್ ರೋಗಿಗಳ ಮೇಲೆ ಮಲೇರಿಯಾ ಔಷಧ ಹೈಡ್ರೋಕ್ಲೋರೋಕ್ವಿನ್, ಹೆಚ್ಐವಿ/ಏಡ್ಸ್ ಔಷಧ ಲೋಪಿನಾವಿರ್ ಮತ್ತು ರಿಟೊನವಿರ್ ಪ್ರಯೋಗವನ್ನು ನಿಲ್ಲಿಸುವಂತೆ ಮಾಡಿರುವ ಮೇಲ್ವಿಚಾರಣಾ ಸಮಿತಿ ಶಿಫಾರಸ್ಸನ್ನು ಅಂಗೀಕರಿಸಲಾಗಿದೆ ಎಂದು ಡಬ್ಲ್ಯೂಹೆಚ್ಒ ಹೇಳಿದೆ.
ಮಧ್ಯಂತರ ಫಲಿತಾಂಶದ ಪ್ರಕಾರ ಹೈಡ್ರೋಕ್ಲೋರೋಕ್ವಿನ್, ಲೋಪಿನಾವಿರ್ ಮತ್ತು ರಿಟೊನವಿರ್ ಕೋವಿಡ್ ರೋಗಿಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಇದು ರೋಗಿಗಳ ಮರಣ ಪ್ರಮಾಣವನ್ನು ಕಡಿಮೆ ಮಾಡಿಲ್ಲ. ಹೀಗಾಗಿ ಪ್ರಯೋಗವನ್ನು ನಿಲ್ಲಿಸಲಾಗುತ್ತಿದೆ ಎಂದು ಡಬ್ಲ್ಯೂಹೆಚ್ಒ ಹೇಳಿದೆ. ಲಸಿಕೆ ಪ್ರಯೋಗಿಸಿದ ಬಳಿಕ ಕೋವಿಡ್ ರೋಗಿಗಳ ಮರಣ ಪ್ರಮಾಣ ಹೆಚ್ಚಾದ ಬಗ್ಗೆಯೂ ಯಾವುದೇ ಪುರಾವೆಗಳಿಲ್ಲ. ಆದರೆ, ಕ್ಲಿನಿಕಲ್ ಪ್ರಯೋಗಾಲಯದ ಸಂಶೋಧನೆಗಳಲ್ಲಿ ಕೆಲವು ಸುರಕ್ಷತಾ ಸಂಕೇತಗಳು ಕಂಡು ಬಂದಿವೆ ಎಂದು ತಿಳಿಸಿದೆ.
ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳು ಅಥವಾ ಕೊರೊನಾ ವೈರಸ್ಗೆ ತುತ್ತಾಗುವ ಮೊದಲು ಅಥವಾ ನಂತರ ಈ ಔಷಧಗಳನ್ನು ಸ್ವೀಕರಿಸಿದವರಿಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಡಬ್ಲ್ಯೂಹೆಚ್ಒ ಹೇಳಿದೆ.