ಕೀವ್(ಉಕ್ರೇನ್): ರಷ್ಯಾ ಮಿಲಿಟರಿ ದಾಳಿಗೆ ಪುಟ್ಟ ದೇಶ ಉಕ್ರೇನ್ ಇನ್ನಿಲ್ಲದ ಸಂಕಷ್ಟಕ್ಕೊಳಗಾಗಿದೆ. ಇದರ ಮಧ್ಯೆ ಕೂಡ ದಿಟ್ಟ ಹೋರಾಟ ಮುಂದುವರೆಸಿದೆ. ಉಕ್ರೇನ್ನ ಬಹುತೇಕ ನಗರಗಳ ಮೇಲೆ ರಷ್ಯಾ ಈಗಾಗಲೇ ದಾಳಿ ನಡೆಸಿದ್ದು, ಪರಿಣಾಮ ಈಗಾಗಲೇ ನೂರಾರು ಸೈನಿಕರು, ನಾಗರಿಕರು ಸಾವನ್ನಪ್ಪಿದ್ದಾರೆ. ಇದರ ಮಧ್ಯೆ ಉಕ್ರೇನ್ ಯೋಧನೋರ್ವ ಸೇತುವೆಯೊಂದಿಗೆ ತನ್ನನ್ನು ಸ್ಫೋಟಿಸಿಕೊಳ್ಳುವ ಮೂಲಕ ರಷ್ಯಾ ಯುದ್ಧ ಟ್ಯಾಂಕರ್ ಉಕ್ರೇನ್ನೊಳಗೆ ಬರುವುದನ್ನ ತಡೆದಿದ್ದಾರೆಂದು ವರದಿಯಾಗಿದೆ.
ರಷ್ಯಾದ ಯುದ್ಧ ಟ್ಯಾಂಕರ್ಗಳು ಮುಂದೆ ಸಾಗಿ ಬರದಂತೆ ತಡೆಯುವ ಉದ್ದೇಶದಿಂದ ದಕ್ಷಿಣ ಪ್ರಾಂತ್ಯದ ಖರ್ಸನ್ ಎಂಬಲ್ಲಿ ಯೋಧನೊಬ್ಬ ಸೇತುವೆಯೊಂದಿಗೆ ತನ್ನನ್ನು ಸ್ಫೋಟಿಸಿಕೊಂಡಿದ್ದಾನೆ. ಆತನ ತ್ಯಾಗವನ್ನ ಉಕ್ರೇನ್ ಮಿಲಿಟರಿ ಶ್ಲಾಘಿಸಿದೆ.
ಇದನ್ನೂ ಓದಿರಿ: ಉಕ್ರೇನ್‌ಗೆ ಫ್ರಾನ್ಸ್ ಶಸ್ತ್ರಾಸ್ತ್ರ ಬಲ.. ಯುದ್ಧ ನಿಲ್ಲಿಸದಿರಲು ಅಧ್ಯಕ್ಷ ಝೆಲೆನ್ಸ್ಕಿ ಪಣ..
ಹೆನಿಚೆಸ್ಕ್ ಸೇತುವೆ ಬಳಿ ಮೆರೈನ್ ಬೆಟಾಲಿಯನ್ ಇಂಜಿನಿಯರ್ ವಿಟಲಿ ಸ್ಕಾಕುನ್ ವೊಲೊಡಿಮಿರೊವ್ಚ್ ಎಂಬ ಯೋಧನ ನಿಯೋಜನೆ ಮಾಡಲಾಗಿತ್ತು. ರಷ್ಯಾ ಯುದ್ಧ ಟ್ಯಾಂಕರ್ಗಳು ಉಕ್ರೇನ್ನೊಳಗೆ ನುಗ್ಗಲು ಈ ಸೇತುವೆ ಮುಖ್ಯವಾಗಿದ್ದು, ಇದನ್ನ ಅರಿತ ಯೋಧ ಸೇತುವೆ ಜೊತೆಗೆ ತನ್ನನ್ನು ಸ್ಫೋಟಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಉಕ್ರೇನಿಯನ್ ಮಿಲಿಟರಿ ಫೇಸ್ಬುಕ್ನಲ್ಲೂ ಮಾಹಿತಿ ಬಿತ್ತರಗೊಂಡಿದೆ.
ಕಳೆದ ಎರಡು ದಿನಗಳಿಂದ ಉಕ್ರೇನ್ನ ವಿವಿಧ ನಗರಗಳ ಮೇಲೆ ರಷ್ಯಾ ಮಿಲಿಟರಿ ಪಡೆ ದಾಳಿ ನಡೆಸುತ್ತಿದ್ದು, ಇದರಿಂದ ಸಾವಿರಾರು ಜನರು ತೊಂದರೆಗೊಳಗಾಗಿದ್ದಾರೆ.