ಕೀವ್: ರಷ್ಯಾ ಮತ್ತು ಉಕ್ರೇನ್ ಮಧ್ಯೆ ಇಂದು ಎರಡನೇ ಸುತ್ತಿನ ಸಂಧಾನ ಸಭೆ ನಡೆಯಲಿದ್ದು, ಅದಕ್ಕೂ ಮೊದಲು ರಷ್ಯಾ ತನ್ನ ದೇಶದ ಮೇಲಿನ ದಾಳಿಯನ್ನು ನಿಲ್ಲಿಸಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಒತ್ತಾಯಿಸಿದ್ದಾರೆ.
ಭಾರೀ ಭದ್ರತೆಯಿರುವ ಸರ್ಕಾರಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ರಷ್ಯಾದ ವಾಯುಪಡೆಗಳು ಉಕ್ರೇನ್ ಮೇಲೆ ದಾಳಿ ಮಾಡುವುದನ್ನು ತಡೆಯಲು ನ್ಯಾಟೋ ರಾಷ್ಟ್ರಗಳು ತಮ್ಮ ದೇಶದ ಮೇಲೆ ರಷ್ಯಾ ವಿಮಾನಗಳ ಹಾರಾಟವನ್ನು ನಿಷೇಧಿಸಬೇಕು. ಇದು ಆ ರಾಷ್ಟ್ರಗಳನ್ನು ರಷ್ಯಾದ ಜೊತೆಗಿನ ತಮ್ಮ ಯುದ್ಧದಲ್ಲಿ ಎಳೆದು ತರುವ ಉದ್ದೇಶವಲ್ಲ ಎಂದು ಹೇಳಿದ್ದಾರೆ.
ರಾಜಧಾನಿಯನ್ನು ರಷ್ಯಾ ಪಡೆಗಳು ಸುತ್ತುವರೆದಿದ್ದು ಕೀವ್ ತೊರೆಯುವ ಪ್ರಸ್ತಾಪವನ್ನು ನಿರಾಕರಿಸಿದ ಝೆಲೆನ್ಸ್ಕಿ, ಒಂದು ವೇಳೆ ಉಕ್ರೇನ್ಗೆ ನ್ಯಾಟೋ ಸದಸ್ಯತ್ವ ನೀಡಲಾಗದಿದ್ದರೆ ನಮ್ಮ ಗಡಿ ಭದ್ರತೆಯ ಬಗ್ಗೆ ಕಾನೂನುಬದ್ಧ ಖಾತರಿಯನ್ನು ನೀಡಬೇಕು ಎಂದು ಕೋರಿದ್ದಾರೆ.
ಮಾತುಕತೆಗೂ ಮೊದಲು ಯುದ್ಧ ನಿಲ್ಲಿಸಿ: ರಷ್ಯಾದ ಜೊತೆಗೆ ಮಾತುಕತೆಗೆ ಮುಂದಾಗಲು ಷರತ್ತುಗಳನ್ನು ವಿಧಿಸಿದ ಉಕ್ರೇನ್ ಅಧ್ಯಕ್ಷ, ಸಂಧಾನಕ್ಕೂ ಮುನ್ನ ರಷ್ಯಾ ದಾಳಿಯನ್ನು ನಿಲ್ಲಿಸಬೇಕು. ಒಂದೆಡೆ ದಾಳಿ ನಡೆಸುತ್ತಾ, ಇನ್ನೊಂದೆಡೆ ಶಾಂತಿ ಮಾತುಕತೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಯುದ್ಧ ನಿಲ್ಲಿಸಿ ಮಾತುಕತೆಗೆ ಬನ್ನಿ ಎಂದು ಖಡಕ್ ಆಗಿ ಹೇಳಿದ್ದಾರೆ.
ನ್ಯಾಟೋಗೆ ಸೇರಿಸಿಕೊಳ್ಳಿ, ಇಲ್ಲ ಖಾತರಿ ನೀಡಿ: ರಷ್ಯಾದ ದಾಳಿಯನ್ನು ತಡೆಯಬೇಕಾದರೆ ತಮಗೆ ಮೊದಲು ನ್ಯಾಟೋ ಸದಸ್ಯ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ನಮ್ಮ ದೇಶದ ಭದ್ರತೆಯ ಬಗ್ಗೆ ಕಾನೂನುಬದ್ಧ ಖಾತ್ರಿಯನ್ನು ನೀಡಬೇಕು ಎಂದು ಝೆಲನ್ಸ್ಕಿ ಬಲವಾಗಿ ವಾದ ಮಂಡಿಸಿದ್ದಾರೆ.
ರಷ್ಯಾದ ಯುದ್ಧದಾಹವನ್ನು ತಡೆಯಬೇಕಾದರೆ ನ್ಯಾಟೋ ರಾಷ್ಟ್ರಗಳು ಆ ದೇಶದ ವಿಮಾನಗಳು ನಿಮ್ಮ ವಾಯುಪ್ರದೇಶದಲ್ಲಿ ಹಾರಾಟ ನಡೆಸದಂತೆ ಸಂಪೂರ್ಣ ನಿರ್ಬಂಧಿಸಬೇಕು. ಅಲ್ಲದೇ ತನಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಬೇಕು. ತಮ್ಮ ಈ ಕೋರಿಕೆ ಇತರ ರಾಷ್ಟ್ರಗಳನ್ನು ಈ ಯುದ್ಧದಲ್ಲಿ ಭಾಗಿವಹಿಸುವಿಕೆಯನ್ನು ಪ್ರಸ್ತಾಪಿಸುವುದಿಲ್ಲ. ಬದಲಾಗಿ ನಮ್ಮ ರಾಷ್ಟ್ರ ರಕ್ಷಣೆಗೆ ನೆರವು ಯಾಚಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಕೊನೆಯವರೆಗೂ ಹೋರಾಟ: ಯುದ್ಧಭೂಮಿಯಲ್ಲಿ ಏಕಾಂಗಿಯಾಗಿರುವ ಉಕ್ರೇನ್ ಅಧ್ಯಕ್ಷ ನಮ್ಮ ರಾಷ್ಟ್ರ, ಗಡಿ ರಕ್ಷಣೆಗಾಗಿ ಕೊನೆಯವರೆಗೂ ಹೋರಾಟ ನಡೆಸುತ್ತೇವೆ. ಇದು ನಮ್ಮ ಮುಂದಿನ ಪೀಳಿಗೆಗಾಗಿ ನಾವು ಮಾಡುತ್ತಿರುವ ವಿರೋಧ. ರಷ್ಯಾ ನಮ್ಮ ಮೇಲೆ ದಾಳಿ ಮಾಡಿ ನಾಶಪಡಿಸುವುದೇ ಅದರ ಮುಖ್ಯ ಧ್ಯೇಯವಾಗಿದೆ. ಈ ದೇಶದ ಮೇಲೆ ಅವರಿಗೆ ಯಾವ ಅಧಿಕಾರವೂ ಇಲ್ಲ ಎಂದು ಗುಡುಗಿದ್ದಾರೆ.
ಒಂದು ವೇಳೆ ಉಕ್ರೇನ್ ಈ ಯುದ್ಧದಲ್ಲಿ ಪತನವಾದರೆ, ಇಲ್ಲಿ ನಿಮ್ಮ ಸಾರ್ವಭೌಮತ್ವ ಸಾಧಿಸಿದರೆ, ಉಳಿದ ದೇಶಗಳು(ನ್ಯಾಟೋ ಸದಸ್ಯ) ಕೂಡ ನಿಮ್ಮ ಸುತ್ತಮುತ್ತಲೇ ಇರುತ್ತವೆ. ಆ ದೇಶಗಳಿಂದಲೂ ಇದೇ ರೀತಿಯ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂಬುದನ್ನು ಮರೆಯಬಾರದು ಎಂದು ರಷ್ಯಾವನ್ನು ಎಚ್ಚರಿಸಿದ್ದಾರೆ.
ಓದಿ: ಉಕ್ರೇನ್ ಮೇಲಿನ ದಾಳಿಗೆ ರಷ್ಯಾ ಬೆಲೆ ತೆರುವಂತೆ ಮಾಡ್ತೇವಿ: ಜೋ ಬೈಡನ್ ಪ್ರತಿಜ್ಞೆ