ಜಿನಿವಾ: ಮಾನವ ಹಕ್ಕುಗಳ ಮಂಡಳಿಯ 46ನೇ ಉನ್ನತ ಮಟ್ಟದ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಕೇಂದ್ರ ವಿದೇಶಾಂಗ ಸಚಿವ ಎಸ್, ಜೈಶಂಕರ್, ಭಯೋತ್ಪಾದನೆ ಮಾನವ ಕುಲಕ್ಕೆ ಅತಿದೊಡ್ಡ ಬೆದರಿಕೆಗಳಲ್ಲಿ ಒಂದಾಗಿದೆ ಎಂದಿದ್ದಾರೆ. ಮೂಲಭೂತವಾಗಿ ಇಂದು ಮನುಷ್ಯರ ಹಕ್ಕು ಕಸಿದುಕೊಂಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ಮೊದಲ ಸಲ ಮಾನವ ಹಕ್ಕುಗಳ ಮಂಡಳಿಯ ಸಭೆಯಲ್ಲಿ ಮಾತನಾಡಿದ ಕೇಂದ್ರ ವಿದೇಶಾಂಗ ಸಚಿವ, ಭಯೋತ್ಪಾದನೆ ವಿರುದ್ಧ ಜಾಗತಿಕವಾಗಿ ಕ್ರಮ ಕೈಗೊಳ್ಳುವಲ್ಲಿ ಭಾರತ ಮುಂಚೂಣಿಯಲ್ಲಿರುತ್ತದೆ ಎಂದಿದ್ದಾರೆ.
ಇದೇ ವೇಳೆ, ಕೊರೊನಾ ವೈರಸ್ ಬಗ್ಗೆ ಮಾತನಾಡಿರುವ ಜೈಶಂಕರ್, ಕೋವಿಡ್ನಿಂದಾಗಿ ವಿಶ್ವದ ಪರಿಸ್ಥಿತಿ ಹಾಗೂ ಆರ್ಥಿಕತೆ ಸಂಪೂರ್ಣವಾಗಿ ನೆಲಕಚ್ಚಿದ್ದು, ಇದರಿಂದ ಹೊರಬರಬೇಕಾದರೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು. ಪ್ರಪಂಚದಲ್ಲಿ ಉದ್ಭವವಾಗಿರುವ ಸಮಸ್ಯೆ ಹೊಗಲಾಡಿಸಲು ಸಂಘ, ಸಂಸ್ಥೆಗಳು ತಮ್ಮ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಿದೆ ಎಂದರು.
ಮಹಾಮಾರಿ ಕೊರೊನಾ ವೈರಸ್ ಹಾಗೂ ಲಾಕ್ಡೌನ್ ಸಂದರ್ಭದಲ್ಲೂ ಯಾವುದೇ ರೀತಿಯ ಮೂಲ ಅಗತ್ಯಗಳಿಗೆ ಧಕ್ಕೆಯಾಗದಂತೆ ಭಾರತ ನಡೆದುಕೊಂಡಿದೆ ಎಂದು ಎಸ್ ಜೈಶಂಕರ್ ಹೇಳಿದ್ದಾರೆ.