ರಷ್ಯಾ: ಇಡೀ ಜಗತ್ತು ಕೊರೊನಾ ವಿರುದ್ಧ ಸಮರ ಸಾರಿ ಹೋರಾಡುತ್ತಿದೆ. ಆದ್ರೆ ಭಯೋತ್ಪಾದಕರು ತಮ್ಮ ಕೃತ್ಯಗಳನ್ನು ಎಗ್ಗಿಲ್ಲದೇ ನಡೆಸುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ರಷ್ಯಾದ ಭದ್ರತಾ ಸಂಸ್ಥೆಯ ಸ್ಥಳೀಯ ಕಚೇರಿಯ ಬಳಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ.
ಆತ್ಮಾಹುತಿ ಬಾಂಬರ್ ಒಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದು, ಆರು ಮಂದಿ ರಷ್ಯಾದ ಕಾನೂನು ಜಾರಿ ಅಧಿಕಾರಿಗಳು ಗಾಯಗೊಂಡಿದ್ದಾರೆ.
ಭಯೋತ್ಪಾದಕರನ್ನು ಬಂಧಿಸಲು ಪ್ರಯತ್ನಿಸಿದ ನಂತರ, ಆತ ತಾನೇ ಬಾಂಬ್ ಸ್ಫೋಟಿಸಿಕೊಂಡಿದ್ದಾನೆ ಎಂದು ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ಸಮಿತಿಯ ವಕ್ತಾರ ನಿಕೊಲಾಯ್ ಮ್ಯಾಕ್ಸಿಮೊವ್ ತಿಳಿಸಿದ್ದಾರೆ.
ರಷ್ಯಾದ ಉಚ್ಕೆಕೆನ್ನಲ್ಲಿರುವ ಫೆಡರಲ್ ಸೆಕ್ಯುರಿಟಿ ಸರ್ವಿಸ್ ಕಟ್ಟಡದ ಹೊರಗೆ ಈ ಸ್ಫೋಟ ಸಂಭವಿಸಿದೆ ಎಂದು ರಷ್ಯಾದ ಭಯೋತ್ಪಾದನಾ ವಿರೋಧಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.