ಮಾಸ್ಕೋ: ಸೈಬೀರಿಯನ್ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 52 ಗಣಿಗಾರರು ಮತ್ತು ರಕ್ಷಕರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ತಿಳಿಸಿವೆ. ಗುರುವಾರದಂದು ಕಲ್ಲಿದ್ದಲು ಗಣಿಯಲ್ಲಿ ಮೀಥೇನ್ ಅನಿಲ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡ ಪರಿಣಾಮ 52 ಗಣಿ ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಈಗಾಗಲೇ14 ಶವಗಳ ಪತ್ತೆಯಾಗಿದ್ದು, ವಿಷಕಾರಿ ಹೊಗೆಯ ಕಾರಣದಿಂದಾಗಿ ಕಾಣೆಯಾದ 38 ಮಂದಿ ಹುಡುಕಾಟ ನಿಲ್ಲಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನೈಋತ್ಯ ಸೈಬೀರಿಯಾದ ಕೆಮೆರೊವೊ ಪ್ರದೇಶದ ಲಿಸ್ಟ್ವ್ಯಾಜ್ನಾಯದ ಗಣಿಯಲ್ಲಿ ಒಟ್ಟು 285 ಜನರು ಕಾರ್ಯ ನಿರ್ವಹಿಸುತ್ತಿದ್ದರು.
ಮೀಥೇನ್ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿದ್ದು, ವಿಷಕಾರಿ ಹೊಗೆ ದಟ್ಟವಾಗಿ ಆವರಿಸತೊಡಗಿತು. ಕೂಡಲೇ ರಕ್ಷಣಾ ಸಿಬ್ಬಂದಿಗಳು 239 ಗಣಿಗಾರರನ್ನು ಬೆಂಕಿ ಅವಘಡ ಸ್ಥಳದಿಂದ ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಿದರು. ಈ ವೇಳೆ 49 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಿಥೇನ್ ಸ್ಫೋಟ ಅಪರೂಪ.. ಆದರೆ?
ರಷ್ಯಾದ ಡೆಪ್ಯುಟಿ ಪ್ರಾಸಿಕ್ಯೂಟರ್ ಜನರಲ್ ಡಿಮಿಟ್ರಿ ಡೆಮೆಶಿನ್ ಸುದ್ದಿಗಾರರೊಂದಿಗೆ ಮಾತನಾಡಿ, ಮಿಥೇನ್ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿದೆ. ಗಣಿಗಾರಿಕೆಯ ಸಮಯದಲ್ಲಿ ಕಲ್ಲಿದ್ದಲಿನಿಂದ ಬಿಡುಗಡೆಯಾಗುವ ಮೀಥೇನ್ ಸ್ಫೋಟಗಳು ಅಪರೂಪ. ಆದರೆ ಇಂತಹ ಸ್ಫೋಟಗಳಿಂದಾಗಿ ಗಣಿಗಾರಿಕೆ ಉದ್ಯಮದಲ್ಲಿ ಹೆಚ್ಚಿನ ಸಾವುನೋವುಗಳನ್ನು ಉಂಟುಮಾಡುತ್ತವೆ ಎಂದಿದ್ದಾರೆ.
ಸಾವಿಗೆ ಸುರಕ್ಷತಾ ನಿಯಮಗಳ ಉಲ್ಲಂಘನೆಯೇ ಕಾರಣವಾಗಿದೆ. ದುರ್ಘಟನೆ ಬಗ್ಗೆ ರಷ್ಯಾದ ತನಿಖಾ ಸಮಿತಿಯು ಕ್ರಿಮಿನಲ್ ತನಿಖೆಯನ್ನು ಪ್ರಾರಂಭಿಸಿದ್ದು, ಗಣಿ ನಿರ್ದೇಶಕ ಮತ್ತು ಇಬ್ಬರು ಹಿರಿಯ ವ್ಯವಸ್ಥಾಪಕರನ್ನು ಬಂಧಿಸಲಾಗಿದೆ ಎಂದು ರಷ್ಯಾದ ತನಿಖಾ ಸಮಿತಿ ಹೇಳಿದೆ.
ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ ಮತ್ತು ಗಾಯಗೊಂಡವರಿಗೆ ಅಗತ್ಯವಿರುವ ಎಲ್ಲಾ ನೆರವು ನೀಡಲು ಸರ್ಕಾರಕ್ಕೆ ಆದೇಶಿಸಿದ್ದಾರೆ.
2016 ರಲ್ಲಿ ರಷ್ಯಾದ ಉತ್ತರದಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಮೀಥೇನ್ ಸ್ಫೋಟದಿಂದಾಗಿ 36 ಗಣಿಗಾರರು ಸಾವನ್ನಪ್ಪಿದ್ದರು. ಘಟನೆಯ ಹಿನ್ನೆಲೆ ಅಧಿಕಾರಿಗಳು ದೇಶದ 58 ಕಲ್ಲಿದ್ದಲು ಗಣಿಗಳ ಸುರಕ್ಷತೆ ಬಗ್ಗೆ ತನಿಖೆ ಕೈಗೊಂಡಿದ್ದರು. ಅವುಗಳಲ್ಲಿ 20 ಅಥವಾ ಶೇಕಡಾ 34 ರಷ್ಟು ಅಸುರಕ್ಷಿತ ಗಣಿಗಳಿವೆ ಎಂದು ಹೇಳಿದರು.