ಜಿನಿವಾ: ವಿಶ್ವದೆಲ್ಲೆಡೆ ಕೊರೊನಾ ಸಾಂಕ್ರಾಮಿಕ ತಗ್ಗುತ್ತಿದ್ದರೂ ಭಾರತದಲ್ಲಿ ದಿಢೀರನೆ ಉಲ್ಬಣಗೊಳ್ಳಲು ಹಲವಾರು ಅಂಶಗಳು ಕಾರಣವಾಗಿದ್ದು, ಇದರಲ್ಲಿ ಧಾರ್ಮಿಕ ಹಾಗೂ ರಾಜಕೀಯ ಸಭೆ-ಸಮಾರಂಭಗಳು ಪ್ರಮುಖ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್‌ಒ) ಹೇಳಿದೆ.
ಭಾರತದಲ್ಲಿ B.1.617 ಕೊರೊನಾ ವೈರಸ್ ತಳಿಯು 2020ರ ಅಕ್ಟೋಬರ್ನಲ್ಲಿ ವರದಿಯಾಗಿದೆ. ಇದೀಗ ದೇಶದಲ್ಲಿ ಕೋವಿಡ್ ಸಾವು-ನೋವು ಹೆಚ್ಚಾಗುವಲ್ಲಿ B.1.617 ಮತ್ತು ಇತರ ರೂಪಾಂತರಗಳ ಪಾತ್ರಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ದೊಡ್ಡ ದೊಡ್ಡ ಮಟ್ಟದಲ್ಲಿ ಮಾಡಿದ ಧಾರ್ಮಿಕ ಹಾಗೂ ರಾಜಕೀಯ ಕಾರ್ಯಕ್ರಮಗಳಿಂದಾಗಿ ಹಿಂದಿಗಿಂತಲೂ ವೇಗವಾಗಿ ವೈರಸ್ ಹರಡಿದೆ ಎಂದು ಡಬ್ಲ್ಯೂಹೆಚ್‌ಒ ಅಭಿಪ್ರಾಯಪಟ್ಟಿದೆ.
ವಾರದ ಜಾಗತಿಕ ವರದಿ ಬಿಡುಗಡೆ ಮಾಡಿರುವ ಡಬ್ಲ್ಯೂಹೆಚ್‌ಒ, ಪ್ರಪಂಚದಾದ್ಯಂತ ಹೊಸ ಕೇಸ್ಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ. ಆದರೆ ವಿಶ್ವದಲ್ಲಿ ವರದಿಯಾಗುತ್ತಿರುವ ಶೇ.50ರಷ್ಟು ಪ್ರಕರಣಗಳು ಹಾಗೂ ಶೇ.30ರಷ್ಟು ಸಾವು ಭಾರತದಲ್ಲಿ ವರದಿಯಾಗುತ್ತಿದೆ. ಆಗ್ನೇಯ ಏಷ್ಯಾದ ಶೇ.95ರಷ್ಟು ಕೇಸ್ ಹಾಗೂ ಶೇ.93ರಷ್ಟು ಸಾವು ಭಾರತದಲ್ಲಿ ದಾಖಲಾಗುತ್ತಿದೆ ಎಂದು ಹೇಳಿದೆ.
ಪಂಚರಾಜ್ಯ ವಿಧಾನಸಭೆ ಚುನಾವಣೆ ಹಾಗೂ ಹಲವರು ರಾಜ್ಯಗಳಲ್ಲಿ ಉಪ ಚುನಾವಣೆಗಾಗಿ ಭಾರತದಲ್ಲಿ ರಾಜಕೀಯ ಪಕ್ಷಗಳು ಬೃಹತ್ ಚುನಾವಣಾ ರ‍್ಯಾಲಿಗಳನ್ನು ನಡೆಸಿದ್ದವು. ಮಹಾ ಶಿವರಾತ್ರಿ ಪ್ರಯುಕ್ತ ಉತ್ತರಾಖಂಡ ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ ದಿನವೊಂದರಲ್ಲೇ ಲಕ್ಷಾಂತರ ಜನರು ಸೇರುತ್ತಿದ್ದರು. ದೇಶದೆಲ್ಲೆಡೆ ಜಾತ್ರೆ, ಮದುವೆ ಸಮಾರಂಭಗಳಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಆದರೆ ಇವೆಲ್ಲಾ ಕಾರ್ಯಕ್ರಮಗಳು ಕೂಡ ಕೋವಿಡ್ ನಿಯಮ ಪಾಲನೆಯಾಗದೆ ನಡೆದಿದ್ದವು. ಇದರ ಬೆನ್ನಲ್ಲೇ ಭಾರತದಲ್ಲಿ ಕೊರೊನಾ ಎರಡನೇ ಅಲೆ ಉಲ್ಬಣಗೊಂಡಿತ್ತು.