ರೋಮ್(ಇಟಲಿ): ಜಿ-20 ರಾಷ್ಟ್ರಗಳ ನಾಯಕರ ಸಮಾವೇಶಕ್ಕೆ ಇಟಲಿಯ ರೋಮ್ಗೆ ಭೇಟಿ ನೀಡಿದ ಪ್ರಧಾನಿ ಮೋದಿ ಇಂದು ವ್ಯಾಟಿಕನ್ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗಲಿದ್ದಾರೆ ಎಂದು ಕೇಂದ್ರ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರನ್ನು ಪ್ರತ್ಯೇಕವಾಗಿ ಪ್ರಧಾನಿ ಭೇಟಿಯಾಗಲಿದ್ದಾರೆ. ಇದಾದ ಕೆಲವು ಸಮಯದ ನಂತರ ಅಧಿಕಾರಿಗಳೊಂದಿಗೆ ನಿಯೋಗ ಮಟ್ಟದ ಮಾತುಕತೆಗಳ ನಡೆಯಬಹುದು ಎಂದು ಹರ್ಷವರ್ಧನ್ ಶ್ರಿಂಗ್ಲಾ ಹೇಳಿದ್ದು, ಪೋಪ್ ಅವರೊಂದಿಗೆ ಮಾತನಾಡುವ ವಿಚಾರದಲ್ಲಿ ಯಾವುದೇ ಅಜೆಂಡಾ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಾಮಾನ್ಯ ಜಾಗತಿಕ ದೃಷ್ಟಿಕೋನಗಳು ಮತ್ತು ಎಲ್ಲರಿಗೂ ಅತ್ಯಂತ ಮುಖ್ಯವಾಗುವ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಕೋವಿಡ್, ಆರೋಗ್ಯ ಸಮಸ್ಯೆಗಳ ವಿರುದ್ಧ ಒಟ್ಟಾಗಿ ಹೋರಾಡುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹರ್ಷವರ್ಧನ್ ಶ್ರಿಂಗ್ಲಾ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 29ರಿಂದ ಅಕ್ಟೋಬರ್ 31ರವರೆಗೆ ಎರಡು ದಿನಗಳ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲು ಶುಕ್ರವಾರ ಇಟಲಿಗೆ ಆಗಮಿಸಿದ್ದಾರೆ. ಇಟಲಿಯ ಪ್ರಧಾನಿ ಮಾರಿಯೋ ಡ್ರಾಘಿ ಅವರ ಆಹ್ವಾನದ ಮೇರೆಗೆ ಅವರು ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದು, ಕಳೆದ ವರ್ಷ ಸೌದಿ ಅರೇಬಿಯಾದಲ್ಲಿ ಏಳನೇ ಜಿ-20 ಶೃಂಗಸಭೆ ನಡೆದಿತ್ತು.
ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ಅಂತಿಮ ದರ್ಶನಕ್ಕೆ ಹರಿದು ಬರುತ್ತಿರುವ ಜನಸಾಗರ