ಕಲೋನ್: ಕೊರೊನಾ ಸಂಕಷ್ಟದ ನಡುವೆಯೂ ಸಾಮಾಜಿಕ ಅಂತರ ಕಾಯ್ದುಕೊಂಡೇ ಜರ್ಮನ್ ಸಂಗೀತ ನೇರ ಪ್ರದರ್ಶನಕ್ಕೆ ಹಾಜರಾಗುವ ಅಪರೂಪದ ಸದಾವಕಾಶ ಶುಕ್ರವಾರ ಸಂಜೆ ಸಂಗೀತ ಅಭಿಮಾನಿಗಳಿಗೆ ದೊರೆಯಿತು.
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಶಿವಾಜಿ ಸಿನಿಮಾದಲ್ಲಿ ಈ ರೀತಿ ಕಾರಲ್ಲೇ ಕುಳಿತು ಸಿನಿಮಾ ನೋಡುವ ದೃಶ್ಯಗಳಿವೆ. ಜರ್ಮನಿಯಲ್ಲಿ ನಡೆದಿರುವ ಈ ಘಟನೆ ಅಚ್ಚು ಸಿನಿಮಾ ಶೈಲಿಯಲ್ಲೇ ಇತ್ತು.
ಕಲೋನ್‌ನಲ್ಲಿರುವ ಸ್ಥಳೀಯ ಬ್ಯಾಂಡ್ 'ಬ್ರಿಂಗ್ಸ್' ಸಂಗೀತ ಪ್ರದರ್ಶನವನ್ನು ಸುಮಾರು 250 ವಾಹನಗಳಲ್ಲಿ ಕುಳಿತು ಅಭಿಮಾನಿಗಳು ಆನಂದಿಸಿದರು. ಪ್ರತಿ ಕಾರಿನಲ್ಲಿ ಗರಿಷ್ಠ ಇಬ್ಬರು ವಯಸ್ಕರು ಮತ್ತು ಒಂದು ಮಗುವಿಗೆ ಮಾತ್ರ ಕುಳಿತು ವೀಕ್ಷಿಸಲು ಅವಕಾಶವಿತ್ತು.
ಬ್ಯಾಂಡ್ ವೇದಿಕೆಯಲ್ಲಿ ಸಂಗೀತ ನೇರ ಪ್ರಸಾರವಾಗುತ್ತಿದ್ದ ವೇಳೆ ಪ್ರದರ್ಶನವನ್ನು ದೊಡ್ಡ ಪರದೆಯಲ್ಲೂ ಪ್ರಸಾರ ಮಾಡಲಾಯಿತು ಮತ್ತು ಧ್ವನಿ ವೈರ್ಲೆಸ್ ಆಗಿ ಕಾರಿನೊಳಗೆ ತಲುಪುವಂತೆ ವ್ಯವಸ್ಥೆ ಮಾಡಲಾಗಿತ್ತು. ಇನ್ನೂ ಅಭಿಮಾನಿಗಳು ಕೂಡ ಪ್ರತೀ ಹಾಡಿನ ನಂತರ ಹಾರ್ನ್ ಬಾರಿಸಿ ಚಪ್ಪಾಳೆ ಸೂಚಿಸುತ್ತಿದ್ದರು. ಹಾಗೆಯೇ ಕೊರೊನಾ ಹಿನ್ನೆಲೆ ನಿಯಮಗಳ ಉಲ್ಲಂಘನೆಯಾಗದಂತೆ ಖಚಿತಪಡಿಸಿಕೊಳ್ಳಲು ಭದ್ರತಾ ಸಿಬ್ಬಂದಿ ನಿರಂತರವಾಗಿ ಪರಿಶೀಲನೆ ನಡೆಸುತ್ತಿದ್ದರು
ಜರ್ಮನಿಯಲ್ಲಿ ಈವರೆಗೂ 1,40,000ಕ್ಕೂ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ಮತ್ತು 4,300ಕ್ಕೂ ಹೆಚ್ಚು ಸಾವು-ನೋವುಗಳು ದಾಖಲಾಗಿವೆ.