ಎಲ್ಲದಕ್ಕೂ ಒಂದು ಮಿತಿಯಿದೆ. ಆದರೆ, ಮನುಷ್ಯದ ಆಲೋಚನೆಗೆ ಮಿತಿಯೇ ಇಲ್ಲ. ಬದುಕೋದು ಹೇಗೆ ಅಂತಾ ಯೋಚಿಸ್ತಾ ಇದ್ದ ಮನುಷ್ಯ ಈಗ ಸಾಯೋದು ಹೇಗೆ ಎಂದು ಆಲೋಚನೆ ಮಾಡ್ತಿದ್ದಾನೆ. ಈ ಆಲೋಚನೆಯಿಂದ ಒಂದು ಹೊಸ, ವಿಭಿನ್ನ ಸಂಶೋಧನೆಯೊಂದು ನಡೆದಿದೆ.
ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಕೂಡ ಯಂತ್ರವೊಂದನ್ನು ತಜ್ಞರು ಕಂಡು ಹಿಡಿದಿದ್ದಾರೆ. ಕೇವಲ ಒಂದು ನಿಮಿಷದಲ್ಲಿ ಯಾವುದೇ ನೋವು ಇಲ್ಲದೇ ವ್ಯಕ್ತಿ ಸಾವನ್ನಪ್ಪುವಂತೆ ಮಾಡುವ ಯಂತ್ರ ಇದಾಗಿದೆ. ಬದುಕಿಸಲು ಅಸಾಧ್ಯವಾಗಿರುವ ಮತ್ತು ವೈದ್ಯರು ಕೈಚೆಲ್ಲಿರುವ ರೋಗಿಗಳಿಗೆ ಈ ಯಂತ್ರವನ್ನು ಬಳಸಲಾಗುತ್ತದೆ.
ಶವಪೆಟ್ಟಿಗೆಯಾಕಾರದಲ್ಲಿ ಈ ಯಂತ್ರವಿದೆ. ಸಾವನ್ನಪ್ಪಲು ಬಯಸುವ ವ್ಯಕ್ತಿಗಳು ಅದರೊಳಗೆ ತೆರಳಿದ ನಂತರ ಅದರಲ್ಲಿನ ಆಕ್ಸಿಜನ್ ಮಟ್ಟವನ್ನು ಕಡಿಮೆ ಮಾಡಿ, ವ್ಯಕ್ತಿಯು ನಿಧಾನವಾಗಿ ಸಾವನ್ನಪ್ಪುವಂತೆ ಈ ಯಂತ್ರ ಮಾಡಲಿದೆ. ಈ ಯಂತ್ರಕ್ಕೆ ಸ್ವಿಟ್ಜರ್ಲ್ಯಾಂಡ್ನಲ್ಲಿ ಕಾನೂನು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ ಎಂದು ತಯಾರಕರು ಹೇಳಿದ್ದಾರೆ.
ಲಾಕ್ಡ್ ಇನ್ ಸಿಂಡ್ರೋಮ್ನಿಂದ ಬಳಲುವ ವ್ಯಕ್ತಿಗಳು ತಮ್ಮ ಕಣ್ಣಿನ ರೆಪ್ಪೆ ಬಡಿಯುವ ಮೂಲಕವೂ ಕಾರ್ಯ ನಿರ್ವಹಣೆ ಮಾಡಬಹುದಾಗಿದೆ. ಲಾಕ್ಡ್ ಇನ್ ಸಿಂಡ್ರೋಮ್ನಿಂದ ಬಳಲುತ್ತಿರುವ ವ್ಯಕ್ತಿಗಳು ಎಲ್ಲಾ ಅರಿವಿದ್ದು, ತಮ್ಮ ಕೈಕಾಲುಗಳನ್ನು ಅಲುಗಾಡಿಸಲು ಸಾಧ್ಯವಾಗುವುದಿಲ್ಲ.
ಕಣ್ಣು ಹೊರತುಪಡಿಸಿ, ದೇಹ ನಿಶ್ಚಲವಾಗಿರುವ ಕಾರಣದಿಂದ ಅಂತಹ ವ್ಯಕ್ತಿಗಳು ಬೇರೊಬ್ಬ ವ್ಯಕ್ತಿಯೊಂದಿಗೆ ಸಂವಹನ ನಡೆಸಲು ಸಾಧ್ಯವಾಗುವುದಿಲ್ಲ. ಕಣ್ಣನ್ನು ಕೇವಲ ಮೇಲೆ- ಕೆಳಗೆ ಚಲಿಸಬಹುದಾದ ಸಾಮರ್ಥ್ಯ ಮತ್ತು ಕಣ್ಣು ಮಿಟುಕಿಸುವ ಸಾಮರ್ಥ್ಯ ಮಾತ್ರ ಅವರಿಗಿರುತ್ತದೆ ಎಂದು ಇಂಡಿಪೆಂಡೆಂಟ್ ಯುಕೆ ವರದಿ ಮಾಡಿದೆ.
ಎಕ್ಸಿಟ್ ಇಂಟರ್ ನ್ಯಾಷನಲ್ ಎಂಬ ಆದಾಯೇತರ ಸಂಘಟನೆಯ ನಿರ್ದೇಶಕರಾದ ಡಾ.ಫಿಲಿಪ್ ನಿಷ್ಕೆ ಈ ಯಂತ್ರವನ್ನು ತಯಾರು ಮಾಡಿದ್ದಾರೆ. ಇವರನ್ನು ಡಾ.ಡೆತ್ ಎಂದೂ ಕರೆಯುತ್ತಾರೆ.
ಮುಂದಿನ ವರ್ಷದೊಳಗೆ ಈ ಯಂತ್ರವನ್ನು ಬಳಸಲು ಲಭ್ಯವಾಗುವಂತೆ ಮಾಡಲು ನಾವು ಸಿದ್ಧರಾಗಿದ್ದೇವೆ. ಈ ಪ್ರಕ್ರಿಯೆ ಮುಂದುವರೆಯುತ್ತಿದೆ ಎಂದು ಡಾ.ಫಿಲಿಪ್ ನಿಷ್ಕೆ ಹೇಳಿದ್ದಾರೆ. ಇವರ ಪ್ರಯತ್ನಕ್ಕೆ ಹಲವಾರು ಮಂದಿ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ಪ್ರಸರಣ ಕಡಿಮೆ ಮಾಡುವ ಚ್ಯುಯಿಂಗ್ ಗಮ್ ಅಭಿವೃದ್ಧಿಪಡಿಸುತ್ತಿರುವ ವಿಜ್ಞಾನಿಗಳು..!