ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಸುಮಾರು 14 ಸಾವಿರ ಕೋಟಿ ರೂ. ಸಾಲ ಮಾಡಿ ವಂಚಿಸಿ ದೇಶಭ್ರಷ್ಟನಾದ ವಜ್ರದ ವ್ಯಾಪಾರಿ ನೀರವ್ ಮೋದಿ ಅವರನ್ನು ಲಂಡನ್‌ನಲ್ಲಿ ಬಂಧಿಸಲಾಗಿದೆ.
ಆರ್ಥಿಕ ಅಪರಾಧಿಗಳ ನೂತನ ಕಾಯ್ದೆಯಡಿ ನೀರವ್ ಮೋದಿಯನ್ನು 'ತಲೆಮರೆಸಿಕೊಂಡ ಆರ್ಥಿಕ ಅಪರಾಧಿ' ಎಂದು ಘೋಷಿಸಿದ ಜಾರಿ ನಿರ್ದೇಶನಾಲಯವು, ಭಾರತದ ಒತ್ತಡಕ್ಕೆ ಮಣಿದಿದೆ. ಇಲ್ಲಿನ ಸ್ಥಳೀಯ ನ್ಯಾಯಾಲಯದ ಮೂಲಕ ಬಂಧನ ವಾರಂಟ್ ಹೊರಡಿಸಿ ಅರೆಸ್ಟ್ ಮಾಡಿಸುವಲ್ಲಿ ಸಕ್ಸಸ್ ಆಗಿದೆ.
'ಲಂಡನ್ ವೆಸ್ಟ್ಮಿನ್ಸ್ಟರ್ ಕೋರ್ಟ್ ಆದೇಶದ ಮೇರೆಗೆ 48 ವರ್ಷದ ನೀರವ್ ಮೋದಿ ಅವರನ್ನು ಬಂಧಿಸಲಾಗಿದೆ. ಮೋದಿ ಸೆಂಟರ್ ಪಾಯಿಂಟ್ ಟವರ್ ಬ್ಲಾಕ್ನ ಪ್ಲಾಟ್ ಒಂದರಲ್ಲಿ ವಾಸಿಸುತ್ತಿದ್ದು, ಮಾಸಿಕ 16 ಲಕ್ಷ ರೂ. ಬಾಡಿಗೆ ಪಾವತಿಸುತ್ತಿದ್ದರು' ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ಮಧ್ಯಾಹ್ನ 3.30ಕ್ಕೆ ವೆಸ್ಟ್ಮಿನ್ಸ್ಟರ್ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುವುದು. ಇನ್ನೊಬ್ಬ ವಂಚಕ ವಿಜಯ್ ಮಲ್ಯ ಪ್ರಕರಣದಂತೆ ನೀರವ್ ಜಾಮೀನು ಪಡೆಯುವ ಸಾಧ್ಯತೆ ಇದೆ ಎಂದು ಬ್ರಿಟಿಷ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇತ್ತ ಲೋಕಸಭೆ ಚುನಾವಣೆ ಕಾವು ಏರುತ್ತಿದ್ದು, ಎರಡನೇ ಅವಧಿಗೆ ಅಧಿಕಾರದ ಗದ್ದುಗೆ ಏರಲು ಎನ್ಡಿಎ ಹವಣಿಸುತ್ತಿದೆ. ನೀರವ್ ಮೋದಿ ಬಂಧನ ಮೋದಿಯ ವಿದೇಶಾಂಗ ರಾಜತಾಂತ್ರಿಕ ನೀತಿಯ ಗೆಲುವು ಎಂದು ಹೇಳಲಾಗುತ್ತಿದೆ.
ದೇಶದ ಕಾನೂನಿನ ಕಣ್ಣಿಗೆ ಮಣ್ಣೆರೆಚಿ ತಲೆಮರೆಸಿಕೊಂಡಿರುವ ನೀರವ್ ಮೋದಿಯ ಗಡೀಪಾರಿಗೆ ಸಿಬಿಐ ಕೂಡ ಹಲವು ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ.
ನೀರವ್ ಮೋದಿ ವಿರುದ್ಧ ಇಂಟರ್ಪೋಲ್ ಕೂಡ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿತ್ತು. ಇದಕ್ಕೆ ಇಂಗ್ಲೆಂಡ್ ಸಹ ಸ್ಪಂದಿಸಿದೆ.