ಜಿನೀವಾ/ಸ್ವಿಜರ್ಲ್ಯಾಂಡ್ : ಯುರೋಪ್ ಖಂಡದ ಎಂಟು ದೇಶಗಳಲ್ಲಿ ಕೋವಿಡ್ ವೈರಾಣುವಿನ ಹೊಸ ರೂಪಾಂತರ ಪತ್ತೆಯಾಗಿರುವುದಾಗಿ ಡಬ್ಲ್ಯುಹೆಚ್‌ಒನ ಯುರೋಪಿಯನ್ ಕಚೇರಿಯ ಮುಖ್ಯಸ್ಥ ಡಾ. ಹ್ಯಾನ್ಸ್ ಕ್ಲುಗೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ನಿಯಂತ್ರಿಸುವ ಅನಿವಾರ್ಯತೆ ಹೆಚ್ಚಿರುವ ಮಧ್ಯೆ, ಕೊರೊನಾದ ಹೊಸ ರೂಪಾಂತರ ಹಿಂದಿನ ಕೋವಿಡ್-19 ವೈರಸ್ಗಿಂತ ಭಿನ್ನವಾಗಿದೆ. ಕಿರಿಯ ವಯಸ್ಸಿನವರಲ್ಲಿ ಹರಡುತ್ತಿದೆ ಎಂದು ಡಬ್ಲ್ಯುಹೆಚ್‌ಒ ಯುರೋಪಿನ ಪ್ರಾದೇಶಿಕ ನಿರ್ದೇಶಕ ಹ್ಯಾನ್ಸ್ ಕ್ಲುಗೆ ಮಾಹಿತಿ ನೀಡಿದ್ದಾರೆ.
ಯುರೋಪ್ನ 8 ದೇಶಗಳಲ್ಲಿ ಈಗ ಹೊಸ ಕೊರೊನಾ ರೂಪಾಂತರ ವೈರಸ್ ಕಂಡು ಬಂದಿದೆ. ಈ ಹಿನ್ನೆಲೆ ಈಗಾಗಲೇ ಅಸ್ತಿತ್ವದಲ್ಲಿರುವ ರಕ್ಷಣಾತ್ಮಕ ಕ್ರಮಗಳನ್ನು ಬಲಪಡಿಸುವುದು ಬಹಳ ಮುಖ್ಯ.
ಸಾಮಾಜಿಕ ಅಂತರ, ಫೇಸ್ ಮಾಸ್ಕ್ ಎಲ್ಲವೂ ಕಡ್ಡಾಯ, ಇನ್ನು ವಿಶ್ವ ಆರೋಗ್ಯ ಸಂಸ್ಥೆ( WHO) ಹೊಸ ಕೊರೊನಾ ಪ್ರಭೇದದ ಕುರಿತು ಹೆಚ್ಚಿನ ಮಾಹಿತಿ ಪಡೆಯುತ್ತಿದ್ದು, ಆ ಬಗ್ಗೆ ಮಾಹಿತಿ ನೀಡುವುದಾಗಿ ಹ್ಯಾನ್ಸ್ ಕ್ಲುಗೆ ಟ್ವೀಟ್ ಮಾಡಿದ್ದಾರೆ.
ಈ ರೂಪಾಂತರ ವೈರಸ್ ಹಿಂದಿನ ಕೊರೊನಾ ವೈರಸ್ ತಳಿಗಿಂತ ಭಿನ್ನವಾಗಿದೆ. ಕಿರಿಯ ವಯಸ್ಕರನ್ನೇ ಹೆಚ್ಚು ಬಾಧಿಸಲಿದೆ. ಹೀಗಾಗಿ, ಈ ಹೊಸ ಪ್ರಬೇಧದ ಕುರಿತು ಸಂಶೋಧನೆ ನಡೆಯುತ್ತಿರುವಾಗ''ಜಾಗರೂಕತೆ ಅತೀ ಮುಖ್ಯ ”ಎಂದು ಕ್ಲುಗೆ ನಂತರದ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಕಳೆದ ವಾರ ಬ್ರಿಟನ್ನಲ್ಲಿ ಕೊರೊನಾ ವೈರಸ್ನ ಹೊಸ ರೂಪಾಂತರ ಪತ್ತೆಯಾಗಿತ್ತು. ತಜ್ಞರ ಪ್ರಕಾರ, ಈ ರೀತಿಯ ಸೋಂಕು ಇತರ SARS ಕೋವಿಡ್-2 ರೂಪಾಂತರಗಳಿಗಿಂತ ಹೆಚ್ಚು ವೇಗವಾಗಿ ಹರಡುತ್ತದೆ ಎಂದಿದ್ದಾರೆ.
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಕಾರ, ಜಗತ್ತಿನಲ್ಲಿ ಈಗಾಗಲೇ 79,712,010 ಕೊರೊನಾ ಪ್ರಕರಣ ದಾಖಲಾಗಿವೆ. ಒಟ್ಟು 1,747,790 ಮಂದಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಕೊರೊನಾ ಸಾಂಕ್ರಾಮಿಕ ರೋಗದಿಂದ ಯುಎಸ್ ಹೆಚ್ಚು ಹಾನಿಗೊಳಗಾದ ದೇಶವಾಗಿ ಮುಂದುವರೆದಿದೆ. ನಂತರದ ಸ್ಥಾನದಲ್ಲಿ ಭಾರತ ಮತ್ತು ಬ್ರೆಜಿಲ್ ಇವೆ.
ಇದನ್ನೂ ಓದಿ:ಬಹುದಿನಗಳ ಬಾಳಿಕೆ ಬರುವ ಲ್ಯಾಕ್ ಬಳೆಗಳು: ಬಣ್ಣ ಬಣ್ಣದ ಅರಗಿನ ಬಳೆಗಳ ಮೋಡಿ ನೋಡಿ..!