ಲಂಡನ್ : ಆಫ್ರಿಕನ್-ಅಮೆರಿಕನ್ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಹತ್ಯೆ ಖಂಡಿಸಿ ಪ್ರತಿಭಟನೆ ಇಂಗ್ಲೆಂಡ್ನಲ್ಲೂ ನಡೆಸಲಾಗುತ್ತಿದೆ. ಲಂಡನ್ನ ಪಾರ್ಲಿಮೆಂಟ್ ಸ್ಕ್ವೇರ್ನಲ್ಲಿರುವ ಮಹಾತ್ಮ ಗಾಂಧಿ ಸೇರಿ ಹಲವಾರು ಸ್ಮಾರಕಗಳಿಗೆ ರಕ್ಷಣೆ ಒದಗಿಸಲಾಗಿದೆ.
ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯ ಹತ್ತಿರದಲ್ಲೇ ಇಂಗ್ಲೆಂಡ್ ಮಾಜಿ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಅವರ ಸ್ಮಾರಕ ಕೂಡ ಇದೆ. ಕಳೆದ ವಾರಾಂತ್ಯದಲ್ಲಿ ಜನಾಂಗೀಯ ಹತ್ಯೆ ವಿರೋಧಿಸಿ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಪ್ರತಿಭಟನೆಯ ಸಂದರ್ಭದಲ್ಲಿ ಈ ಪ್ರತಿಮೆಗಳ ಬಳಿ ಪ್ರತಿಭಟನಾಕಾರರು ತೆರಳಲು ಯತ್ನಿಸಿದ್ದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ಘರ್ಷಣೆ ಉಂಟಾಗಿತ್ತು.
ಈ ವಾರಾಂತ್ಯದಲ್ಲಿ ಜನಾಂಗೀಯ ವಿರೋಧಿ ಗುಂಪುಗಳು ಮತ್ತು ಬಲಪಂಥೀಯ ಸಂಘಟನೆಗಳು ಲಂಡನ್ನಲ್ಲಿ ಪ್ರತಿಭಟನೆ ನಡೆಸಲು ಯೋಜಿಸುತ್ತಿರುವುದರಿಂದ ಹೆಚ್ಚಿನ ಘರ್ಷಣೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
'ಪಾರ್ಲಿಮೆಂಟ್ ಸ್ಕ್ವೇರ್ನಲ್ಲಿರುವ ವಿನ್ಸ್ಟನ್ ಚರ್ಚಿಲ್ ಅವರ ಪ್ರತಿಮೆ ಈ ದೇಶವನ್ನು ಮತ್ತು ಇಡೀ ಯುರೋಪನ್ನು ಫ್ಯಾಸಿಸ್ಟ್ ಮತ್ತು ಜನಾಂಗೀಯ ದಬ್ಬಾಳಿಕೆಯಿಂದ ರಕ್ಷಿಸುವಲ್ಲಿ ಅವರು ಸಾಧಿಸಿದ ಸಾಧನೆಯ ಶಾಶ್ವತ ನೆನಪಾಗಿದೆ' ಎಂದು ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಟ್ವೀಟ್ ಮಾಡಿದ್ದಾರೆ.
ಈ ರಾಷ್ಟ್ರೀಯ ಸ್ಮಾರಕವು ಇಂದು ಹಿಂಸಾತ್ಮಕ ಪ್ರತಿಭಟನಾಕಾರರ ದಾಳಿಯ ಅಪಾಯಕ್ಕೆ ಒಳಗಾಗುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದಿದ್ದಾರೆ. ವಿನ್ಸ್ಟನ್ ಚರ್ಚಿಲ್ ಮಹಾತ್ಮ ಗಾಂಧೀಜಿ ಮತ್ತು ನೆಲ್ಸನ್ ಮಂಡೇಲಾ ಸೇರಿದಂತೆ ಅಪಾಯದಲ್ಲಿರುವ ಪ್ರಮುಖ ಪ್ರತಿಮೆಗಳು ಮತ್ತು ಸ್ಮಾರಕಗಳನ್ನು ಸಂಪೂರ್ಣವಾಗಿ ಮುಚ್ಚಿದ್ದು ರಕ್ಷಣೆ ಒದಗಿಸಲಾಗಿದೆ.