ಲಂಡನ್ : ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಮುಂದಿನ ವಾರ ನಡೆಯಲಿರುವ ಕೊರೊನಾ ಸಾಂಕ್ರಾಮಿಕದ ಬಳಿಕ ಜಗತ್ತಿನ ದೃಷ್ಟಿಕೋನ ಎಂಬ ಇಂಡಿಯಾ ಗ್ಲೋಬಲ್ ವೀಕ್ ಶೃಂಗಸಭೆಯ ನೇತೃತ್ವ ವಹಿಸಲಿದ್ದು, ಇದು ಭಾರತದ ಜಾಗತೀಕರಣದ ಅತಿ ದೊಡ್ಡ ಅಂತಾರಾಷ್ಟ್ರೀಯ ಸಮಾವೇಶಗಳಲ್ಲಿ ಒಂದಾಗಿದೆ.
#BeTheRevival 'ಭಾರತ ಮತ್ತು ಉತ್ತಮ ಹೊಸ ಪ್ರಪಂಚ' ಎಂಬ ಘೋಷವಾಕ್ಯದಡಿ ಜುಲೈ 9 ಮತ್ತು 11 ರ ನಡುವೆ ಮೂರು ದಿನಗಳ ಕಾಲ ಈ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಭಾರತವು ಜಗತ್ತಿಗೆ ನೀಡಬೇಕಾದ ವ್ಯಾಪಾರ, ಕಾರ್ಯತಂತ್ರ ಮತ್ತು ಸಾಂಸ್ಕೃತಿಕ ಅವಕಾಶಗಳನ್ನು ಅನ್ವೇಷಿಸಲು ಮತ್ತು ಕೋವಿಡ್ -19 ನಿಂದ ಜಾಗತಿಕವಾಗಿ ಎದುರಾಗಿರುವ ಸವಾಲುಗಳ ಕುರಿತು ಚರ್ಚಿಸಲು ಒಂದು ವೇದಿಕೆಯಾಗಲಿದೆ.
ಯುಕೆ ಮೂಲದ ಮೀಡಿಯಾ ಹೌಸ್ ಇಂಡಿಯಾ ಐಎನ್ಸಿ ಗ್ರೂಪ್ ಈ ವೆಬ್‌ನಾರ್ ಆಯೋಜಿಸುತ್ತಿದೆ. ಸಮಾವೇಶದಲ್ಲಿ ಜಿಯೋಪಾಲಿಟಿಕ್ಸ್, ವ್ಯವಹಾರ, ಸಂಸ್ಕೃತಿ ಮತ್ತು ಕಲೆ, ಉದಯೋನ್ಮುಖ ತಂತ್ರಜ್ಞಾನಗಳು, ಬ್ಯಾಂಕಿಂಗ್ ಮತ್ತು ಫೈನಾನ್ಸ್, ಫಾರ್ಮಾ, ರಕ್ಷಣಾ ಮತ್ತು ಭದ್ರತೆ, ಸಾಮಾಜಿಕ ಪರಿಣಾಮ ಮತ್ತು ಭಾರತೀಯ ವಲಸೆಗಾರರ ಪ್ರಭಾವದ ಕುರಿತು ವಿವಿಧ ಚರ್ಚಾಗೋಷ್ಠಿಗಳು ನಡೆಯಲಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಇಂಡಿಯಾ ಐಎನ್ಸಿ ಗ್ರೂಪ್‌ನ ಸ್ಥಾಪಕ ಮತ್ತು ಸಿಇಒ ಮನೋಜ್ ಲಾಡ್ವಾ, ಕೋವಿಡ್ ಸಂದಿಗ್ದತೆಯಿಂದ ನಾವು ಹೊರ ಬರುತ್ತಿದ್ದಂತೆ ಜಗತ್ತಿನ ಎಲ್ಲಾ ಕ್ಷೇತ್ರಗಳನ್ನು ಸಹಜ ಸ್ಥಿತಿಗೆ ತರಲು ಎದುರಾಗುವ ಸವಾಲುಗಳನ್ನು ಅರ್ಥಮಾಡಿಕೊಳ್ಳುವ ಮತ್ತು ತಿಳಿವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳುವತ್ತ ನಾವು ಯೋಚಿಸೋಣ ಎಂದು ಹೇಳಿದ್ದಾರೆ. ಕೊರೊನಾ ವೈರಸ್ ಹಿನ್ನೆಲೆ ಸಮಾವೇಶವು ವರ್ಚುವಲ್ ಆಗಿ ನಡೆಯಲಿದೆ.
ಸಮಾವೇಶದಲ್ಲಿ ಸಚಿವ ಜೈಶಂಕರ್ ಜೊತೆ ರೈಲ್ವೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಇತ್ತೀಚೆಗೆ ವಿಶ್ವಸಂಸ್ಥೆಯಿಂದ ನಿವೃತ್ತರಾದ ಭಾರತೀಯ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಮತ್ತು ಲೇಖಕ - ರಾಜಕಾರಣಿ ಶಶಿ ತರೂರ್ ಭಾಗವಹಿಸಲಿದ್ದಾರೆ.
ಆಸ್ಟ್ರೇಲಿಯಾ ಕ್ರಿಕೆಟ್ನ ದಂತಕಥೆ ಸ್ಟೀವ್ ವಾ ಮತ್ತು ಆರ್ಟ್ ಆಫ್ ಲಿವಿಂಗ್ ಫೌಂಡೇಶನ್‌ನ ರವಿಶಂಕರ್ ಗುರೂಜಿ ಸೇರಿದಂತೆ ಸುಮಾರು 250 ಮಂದಿ ಸಮಾವೇಶದಲ್ಲಿ ಮಾತನಾಡಲಿದ್ದಾರೆ. ಸುಮಾರು 75 ವಿವಿಧ ಗೋಷ್ಠಿಗಳು ನಡೆಯಲಿವೆ, 5 ಸಾವಿರದಷ್ಟು ಮಂದಿ ಭಾಗವಹಿಸಲಿದ್ದಾರೆ.