ರೋಮ್: ಕೊರೊನಾ ವೈರಸ್ ದಾಳಿಯಿಂದ ಕಂಗೆಟ್ಟಿರುವ ಇಟಲಿಯಲ್ಲಿ ವಿಧಿಸಲಾಗಿರುವ ಲಾಕ್ಡೌನ್ ಸುದೀರ್ಘ ಕಾಲ ಮುಂದುವರೆಯುವ ಲಕ್ಷಣಗಳಿವೆ. ಇಟಲಿಯ ಅರ್ಥವ್ಯವಸ್ಥೆಯ ಮೇಲೆ ಹಾಗೂ ಜನತೆಯ ದೈನಂದಿನ ಜೀವನಕ್ಕೆ ಎಷ್ಟೇ ತೊಂದರೆಯಾದರೂ ಲಾಕ್ಡೌನ್ ಮುಂದುವರಿಯಲಿದ್ದು, ಜನತೆ ಸುದೀರ್ಘ ಲಾಕ್ಡೌನ್ ಎದುರಿಸಲು ಸಿದ್ಧರಾಗಿರುವಂತೆ ಅಲ್ಲಿನ ಸರ್ಕಾರ ತಿಳಿಸಿದೆ.
ಶನಿವಾರ ಇಟಲಿಯಲ್ಲಿ ಕೊರೊನಾದಿಂದ 756 ಜನ ಹಾಗೂ ಶುಕ್ರವಾರ 969 ಜನ ಸಾವಿಗೀಡಾಗಿದ್ದಾರೆ. ಕೊರೊನಾ ಹೊಡೆತದಿಂದ ಸುಧಾರಿಸಿಕೊಳ್ಳಲು ದೇಶ ಯತ್ನಿಸುತ್ತಿರುವ ಮಧ್ಯೆ, ಸಚಿವರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಕಚೇರಿಯಿಂದ ಪ್ರಕಟಣೆ ಹೊರಡಿಸಲಾಗಿದ್ದು, ಲಾಕ್ಡೌನ್ ಅನ್ನು ಪರಿಸ್ಥಿತಿ ನೋಡಿಕೊಂಡು ಹಂತ ಹಂತವಾಗಿ ತೆರವುಗೊಳಿಸಲಾಗುವುದು ಎಂದು ತಿಳಿಸಲಾಗಿದೆ.
ಪ್ರಸ್ತುತ ವಿಧಿಸಲಾಗಿರುವ ಲಾಕ್ಡೌನ್ ಏಪ್ರಿಲ್ 3 ರಂದು ಕೊನೆಗೊಳ್ಳಲಿದೆ. 'ಏ.3 ರಂದು ಕೊನೆಗೊಳ್ಳಲಿರುವ ಲಾಕ್ಡೌನ್ ಅನ್ನು ಮತ್ತಷ್ಟು ಅವಧಿಗೆ ಮುಂದುವರಿಸದೇ ಬೇರೆ ದಾರಿಯೇ ಇಲ್ಲ. ಈ ಪರಿಸ್ಥಿತಿಗಳಲ್ಲಿ ಲಾಕ್ಡೌನ್ ತೆರವುಗೊಳಿಸುವುದು ಬುದ್ಧಿವಂತಿಕೆಯ ಕ್ರಮವಾಗಲಾರದು. ನಾವೆಲ್ಲರೂ ಸಹಜ ಸ್ಥಿತಿಗೆ ಮರಳಲು ಉತ್ಸುಕರಾಗಿದ್ದೇವೆ. ಆದರೆ, ಹಂತ ಹಂತವಾಗಿ ಸಹಜತೆಯನ್ನು ಮರಳಿಸಬೇಕಿದೆ.' ಎಂದು ಇಟಲಿ ಪ್ರಾದೇಶಿಕ ವ್ಯವಹಾರಗಳ ಸಚಿವ ಫ್ರಾನ್ಸೆಸ್ಕೊ ಬೊಕ್ಸಿಯಾ ಹೇಳಿದ್ದಾರೆ.