ರೋಮ್ (ಇಟಲಿ): ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನಕ್ಕೆ ಆಶಾಕಿರಣವೊಂದು ಗೋಚರಿಸಿದೆ. ಜಿ-20 (ಗ್ರೂಪ್- 20) ರಾಷ್ಟ್ರಗಳ ನಾಯಕರು ಆತಿಥೇಯ ಇಟಲಿಯ ರೋಮ್ ಮೂಲಕ ವರ್ಚುವಲ್ ಸಭೆ ನಡೆಸಿದ್ದು, ಮಾನವೀಯತೆಯ ನೆಲೆಯ ಮೇಲೆ ತಾಲಿಬಾನ್ ಸರ್ಕಾರಕ್ಕೆ ನೆರವು ನೀಡಲು ನಿರ್ಧರಿಸಿದ್ದಾರೆ.
1. ಯುರೋಪಿಯನ್ ಯೂನಿಯನ್‌ನಿಂದ $1.2 ಬಿಲಿಯನ್ ಘೋಷಣೆ
20 ರಾಷ್ಟ್ರಗಳ ಮುಖ್ಯಸ್ಥರು/ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸಿದ್ದ ಸಭೆಯಲ್ಲಿ ಅಫ್ಘಾನಿಸ್ತಾನದ ಪುನಶ್ಚೇತನಕ್ಕೆ ಯೂರೋಪಿಯನ್ ಯೂನಿಯನ್ ಸುಮಾರು 1.2 ಬಿಲಿಯನ್ ಡಾಲರ್ ನೆರವು ನೀಡಲು ಮುಂದಾಗಿದೆ. ಇದೇ ವೇಳೆ, ತಾಲಿಬಾನ್ ಜೊತೆಗೆ ಸಂಪರ್ಕ ಉಳಿಸಿಕೊಳ್ಳುವ ಅಗತ್ಯತೆಯನ್ನು ಇಟಲಿ ಒತ್ತಿಹೇಳಿದೆ.
2. ಅಫ್ಘಾನಿಸ್ತಾನ ವಿಚಾರವಾಗಿ ಜಿ-20 ಸಭೆಗೆ ಒತ್ತಾಯಿಸುತ್ತಿತ್ತು ಇಟಲಿ
ಅತ್ಯಂತ ಕುತೂಹಲಕಾರಿ ವಿಚಾರವೆಂದರೆ, ಇಟಲಿಯ ಪ್ರಧಾನಿ ಮಾರಿಯೋ ಡ್ರಾಗಿ ಅವರು, ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ಕೇವಲ 5 ದಿನಗಳಲ್ಲಿ ಜಿ-20 ನಾಯಕರ ಸಭೆ ಕರೆಯಬೇಕೆಂದು ಒತ್ತಾಯಿಸುತ್ತಿದ್ದರು. ವಾದಿಸುವ ಅಥವಾ ಪ್ರತಿಕ್ರಿಯೆ ನೀಡುವ ಬದಲಿಗೆ ಜಿ-20 ರಾಷ್ಟ್ರಗಳು ಗುರುತರ ಜವಾಬ್ದಾರಿ ಹೊಂದಿವೆ. ಈ ತುರ್ತು ಪರಿಸ್ಥಿತಿಯಲ್ಲಿ ಅಫ್ಘನ್ ಜನರಿಗೆ ನಾವು ನೆರವಾಗಬೇಕಿದೆ ಎಂದು ಡ್ರಾಗಿ ಹೇಳಿದ್ದಾರೆ.
3. ಚೀನಾ, ರಷ್ಯಾದಿಂದ ಅಧ್ಯಕ್ಷರ ಬದಲಿಗೆ ಪ್ರತಿನಿಧಿಗಳು ಭಾಗಿ
ಅಫ್ಘಾನಿಸ್ತಾನದ ಮಿತ್ರರಾಷ್ಟವೆಂದೇ ಕರೆಸಿಕೊಳ್ಳಲಾಗುವ ಚೀನಾ, ರಷ್ಯಾದ ಅಧ್ಯಕ್ಷರ ಬದಲಾಗಿ ಅವರ ಪ್ರತಿನಿಧಿಗಳು ಸಭೆಯಲ್ಲಿ ಹಾಜರಾಗಿದ್ದರು.
4. ನೋವು ಅನುಭವಿಸುವುದನ್ನು ನೋಡುತ್ತಾ ಕೂರುವುದು ಸರಿಯಲ್ಲ- ಜರ್ಮನಿ
ಅಲ್ಲಿನ 4 ಕೋಟಿ ಜನರು ಅವ್ಯವಸ್ಥೆಯಲ್ಲಿರುವುದನ್ನು ಮತ್ತು ಅವರ ಅಧಃಪತನ ಹೊಂದುತ್ತಿರುವುದನ್ನು ನೋಡುತ್ತಾ ಕೂರುವುದು ಅಂತಾರಾಷ್ಟ್ರೀಯ ಸಮುದಾಯದ ಗುರಿಯಾಗಬಾರದು ಎಂದು ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅಭಿಪ್ರಾಯಪಟ್ಟರು.
5. ಅಮೆರಿಕ ಮತ್ತು ಟರ್ಕಿ ಹೇಳಿದ್ದೇನು?
ಈ ಸಭೆಯ ನಂತರ ಅಧಿಕೃತ ಹೇಳಿಕೆ ಬಿಡುಗಡೆ ಅಮೆರಿಕ, ಐಸಿಸ್ನಂತಹ ಉಗ್ರಗಾಮಿ ಸಂಘಟನೆಗಳಿಂದ ಬೆದರಿಕೆ ಸೇರಿದಂತೆ, ಭಯೋತ್ಪಾದನಾ ನಿಗ್ರಹ ಪ್ರಯತ್ನಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿತು.
ಟರ್ಕಿಯ ಅಧ್ಯಕ್ಷ ಎರ್ಡೋಗನ್ ಜಿ-20 ಸಭೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ತಾಲಿಬಾನ್ ನಾವು ನಿರೀಕ್ಷೆ ಮಾಡಿದ್ದನ್ನು ಇನ್ನೂ ತಲುಪಿಲ್ಲ ಎಂದರು. ಈ ಮೂಲಕ ತಾಲಿಬಾನ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.
ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಅಫ್ಘಾನಿಸ್ತಾನಕ್ಕೆ ಅಂತಾರಾಷ್ಟ್ರೀಯ ನೆರವು ನಿರ್ಬಂಧಿಸಲಾಗಿದೆ. ವಿದೇಶದಲ್ಲಿ ಇರುವ ಆ ದೇಶದ ಸ್ವತ್ತುಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಎಲ್ಲಾ ಕಾರಣಗಳಿಂದ ಅಲ್ಲಿ ಆಹಾರದ ಬೆಲೆಗಳೂ ಕೂಡಾ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಈ ಸಭೆ ಅತ್ಯಂತ ಪ್ರಾಮುಖ್ಯತೆ ಪಡೆದಿದೆ.
6. ಭಾರತದ ನಿಲುವೇನು?
ಜಿ-20 ಶೃಂಗಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಅಫ್ಘಾನಿಸ್ತಾನ ಭಯೋತ್ಪಾದಕರ ಮೂಲವಾಗುತ್ತಿದ್ದು, ಅದನ್ನೆಲ್ಲ ತಡೆಯಬೇಕಾದ ಅನಿವಾರ್ಯತೆ ಇದೆ ಎಂದು ಮತ್ತೆ ಒತ್ತಿ ಹೇಳಿದರು.
ಇದನ್ನೂ ಓದಿ: ಅಫ್ಘಾನಿಸ್ತಾನ ಭಯೋತ್ಪಾದನೆಯ ಮೂಲವಾಗುವುದನ್ನ ತಡೆಯಿರಿ: ಜಿ-20 ಶೃಂಗಸಭೆಯಲ್ಲಿ ನಮೋ
ಜಿ-20 ಒಕ್ಕೂಟ ಬಗ್ಗೆ ಒಂದಿಷ್ಟು ಮಾಹಿತಿ..
ವಿಶ್ವದ ಅತಿ ದೊಡ್ಡ ಆರ್ಥಿಕತೆಯನ್ನು ಹೊಂದಿರುವ 20 ರಾಷ್ಟ್ರಗಳು ಮತ್ತು ಒಕ್ಕೂಟಗಳು ಈ ಗುಂಪಿನಲ್ಲಿವೆ. ಅವುಗಳೆಂದರೆ, ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ಯೂನಿಯನ್.