ಪ್ಯಾರಿಸ್/ನವದೆಹಲಿ: ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಮುಜುಗರಕ್ಕೀಡಾಗಿದೆ. ಅಂತಾರಾಷ್ಟ್ರೀಯ ಸಂಸ್ಥೆ ಎಫ್ಎಟಿಎಫ್(ಹಣಕಾಸು ಕ್ರಿಯಾ ಕಾರ್ಯಪಡೆ) ಪಾಕಿಸ್ತಾನವನ್ನು 'ಬ್ಲ್ಯಾಕ್ ಲಿಸ್ಟ್'ಗೆ ಸೇರಿಸುವ ಸಾಧ್ಯತೆ ದಟ್ಟವಾಗಿದ್ದು, ಈ ಬಗ್ಗೆ ಪ್ಯಾರಿಸ್ನಲ್ಲಿ ಎಫ್ಎಟಿಎಫ್ ಸದಸ್ಯ ರಾಷ್ಟ್ರಗಳ ಸಭೆಯಲ್ಲಿ ಮಾತುಕತೆ ನಡೆಸಲಾಗಿದೆ ಎಂದು ಹೇಳಲಾಗ್ತಿದೆ.
ಎಫ್ಎಟಿಫ್(Financial Action Task Force) ಕೇಂದ್ರ ಕಚೇರಿ ಪ್ಯಾರಿಸ್ನಲ್ಲಿ ಭಾನುವಾರದಿಂದ ನಡೆಯುತ್ತಿರುವ ಸಭೆಯಲ್ಲಿ ಈ ಕುರಿತು ಮಾತುಕತೆ ನಡೆದಿದೆ ಎನ್ನಲಾಗ್ತಿದ್ದು, ಇದರಿಂದ ಪಾಕ್ ಪ್ರಧಾನಿ ಇಮ್ರಾನ್ ಖಾನ್ಗೆ ಮತ್ತೆ ಸಂಕಷ್ಟ ಎದುರಾಗಲಿದೆ.
ಪಾಕಿಸ್ತಾನ ಉಗ್ರರನ್ನು ಪೋಷಿಸುತ್ತಿದೆ ಎಂದು ಭಾರತವು ಹಲವು ಬಾರಿ ನೇರ ಆರೋಪ ಮಾಡಿದೆ. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲೂ ಪ್ರತಿ ಬಾರಿ ಈ ಬಗ್ಗೆ ಭಾರತ ನೇರವಾಗಿಯೇ ಪಾಕಿಸ್ತಾನದತ್ತ ಬೊಟ್ಟು ಮಾಡಿ ತೋರಿಸಿದೆ. ಇದರಿಂದಲೇ ಪಾಕ್ಗೆ ಜಾಗತಿಕ ಮಟ್ಟದಲ್ಲಿ ಮುಜುಗರವುಂಟಾಗಿತ್ತು. ಇನ್ನೊಂದೆಡೆ ಉಗ್ರರಿಗೆ ಪಾಕಿಸ್ತಾನ ಅಕ್ರಮವಾಗಿ ಹಣ ವರ್ಗಾವಣೆ ಮಾಡುತ್ತಿದೆ ಮತ್ತು ಉಗ್ರರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜಾಗತಿಕ ಕಾವಲುಪಡೆ (ಅಂತಾರಾಷ್ಟ್ರೀಯ ಶಾಂತಿ ಸಂಸ್ಥೆ)ಯೂ ಹೇಳಿದೆ. ಹೀಗಾಗಿ ಪಾಕ್ ವಿರುದ್ಧ ಜಾಗತಿಕ ಸಂಸ್ಥೆಯಾದ ಹಣಕಾಸು ಕ್ರಿಯಾ ಕಾರ್ಯಪಡೆಯೂ ಈ ಗಟ್ಟಿ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.
ಎಫ್ಎಟಿಎಫ್(Financial Action Task Force) ಅಂದರೆ ಏನು!
ಎಫ್ಎಟಿಎಫ್ ಅಂದರೆ, ಹಣಕಾಸು ಕ್ರಿಯಾ ಕಾರ್ಯಪಡೆ. ಇದು 1989 ರಲ್ಲಿ ಸ್ಥಾಪಿತವಾದ ಅಂತಾರಾಷ್ಟ್ರೀಯ ಸ್ವತಂತ್ರ ಸಂಸ್ಥೆ. ಪ್ರಸ್ತುತ ಭಾರತ ಸೇರಿದಂತೆ ಜಗತ್ತಿನ 37 ಸದಸ್ಯ ರಾಷ್ಟ್ರಗಳು ಹಾಗೂ 2 ಪ್ರಾದೇಶಿಕ ಸಂಸ್ಥೆಗಳು ಇದರ ಸದಸ್ಯತ್ವ ಹೊಂದಿವೆ. ಅಕ್ರಮ ಹಣ ವರ್ಗಾವಣೆ, ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಉದ್ದೇಶದಿಂದ ಈ ಸಂಸ್ಥೆ ಸ್ಥಾಪನೆಗೊಂಡಿದೆ. ಹೀಗಾಗಿ ಇದನ್ನು 'ನೀತಿ ರೂಪಕ ಸಂಸ್ಥೆ' ಎಂದೇ ಹೇಳಲಾಗುತ್ತದೆ. ಇದರ ಕೇಂದ್ರ ಕಚೇರಿ ಫ್ರಾನ್ಸ್ನ ರಾಜಧಾನಿ ಪ್ಯಾರಿಸ್ನಲ್ಲಿದೆ.
ಈಗಾಗಲೇ ಗ್ರೇ ಲಿಸ್ಟ್ನಲ್ಲಿದೆ ಪಾಕ್...
ಕಳೆದ ವರ್ಷವಷ್ಟೇ ಪಾಕಿಸ್ತಾನವನ್ನು ಎಫ್ಎಟಿಫ್ ಗ್ರೇ ಲಿಸ್ಟ್ಗೆ ಸೇರಿಸಿತ್ತು. ಇದರ ಪ್ರಕಾರ ಪಾಕ್ಗೆ 2019ರ ಅಕ್ಟೋಬರ್ವರೆಗೆ, ಉಗ್ರರಿಗೆ ಹಣಕಾಸಿನ ನೆರವು ಮತ್ತು ಹಣ ವರ್ಗಾವಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿತ್ತು.
'ಬ್ಲ್ಯಾಕ್ ಲಿಸ್ಟ್' ಅಂದರೆ ಏನು!
ಬ್ಲ್ಯಾಕ್ ಲಿಸ್ಟ್ಗೆ ಹಾಕಲಾದ ದೇಶಗಳನ್ನು ಸಹಕಾರೇತರ ದೇಶಗಳು ಎಂದು ಪರಿಗಣಿಸಲಾಗುತ್ತದೆ. ಅಂದರೆ ಈ ದೇಶಗಳು ಉಗ್ರರಿಗೆ ಹಣಕಾಸಿನ ನೆರವು ನೀಡುತ್ತವೆ ಮತ್ತು ಹಣ ವರ್ಗಾವಣೆ ಮಾಡುತ್ತಿವೆ ಎಂದರ್ಥ.