ವಾಷಿಂಗ್ಟನ್, ಅಮೆರಿಕ 0: ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ್ದು, ಅಮೆರಿಕ ಮತ್ತು ನ್ಯಾಟೋ ಪಡೆಗಳು ಉಕ್ರೇನ್‌ನಲ್ಲಿ ರಷ್ಯಾದ ವಿರುದ್ಧ ಹೋರಾಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡನ್ ಮತ್ತೆ ಸ್ಪಷ್ಟನೆ ನೀಡಿದ್ದು, ಅಂಥಹ ಸ್ಥಿತಿ ಏರ್ಪಟ್ಟರೆ ಅದು ಮೂರನೇ ವಿಶ್ವ ಯುದ್ಧಕ್ಕೆ ಕಾರಣವಾಗಬಹುದು ಎಂದಿದ್ದಾರೆ.
ರಷ್ಯಾದ ಮೇಲೆ ಹೆಚ್ಚುವರಿ ನಿರ್ಬಂಧಗಳನ್ನು ಘೋಷಿಸಿದ ನಂತರ ಮಾತನಾಡಿದ ಬೈಡನ್, ನಾವು ನ್ಯಾಟೋದ ಪ್ರತಿ ಇಂಚು ಪ್ರದೇಶವನ್ನು ರಕ್ಷಿಸುತ್ತೇವೆ. ಯುರೋಪ್‌ನಲ್ಲಿನ ನಮ್ಮ ಮಿತ್ರರಾಷ್ಟ್ರಗಳೊಂದಿಗೆ ಒಟ್ಟಾಗಿ ನಿಲ್ಲುವುದನ್ನು ಮುಂದುವರಿಸಲಿದ್ದೇವೆ ಎಂದಿದ್ದಾರೆ.
ನಾವು ಉಕ್ರೇನ್‌ನಲ್ಲಿ ರಷ್ಯಾ ವಿರುದ್ಧ ಯುದ್ಧ ಮಾಡುವುದಿಲ್ಲ. ನ್ಯಾಟೋ ಮತ್ತು ರಷ್ಯಾ ನಡುವಿನ ನೇರ ಸಂಘರ್ಷ ಮೂರನೇ ವಿಶ್ವ ಯುದ್ಧ ಆಗಲಿದೆ. ನಾವು ಅದನ್ನು ತಡೆಯಲು ಶ್ರಮಿಸಬೇಕು ಎಂದು ಜೋ ಬೈಡನ್ ಮನವಿ ಮಾಡಿದ್ದಾರೆ.
ರಷ್ಯಾದಿಂದ ರಾಸಾಯನಿಕ ಶಸ್ತ್ರಾಸ್ತ್ರಗಳ ಬಳಕೆಯಾಗುತ್ತಿದ್ದು, ಅಮೆರಿಕ ಮಿಲಿಟರಿಯನ್ನು ಪ್ರಚೋದಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಬೈಡನ್, ರಾಸಾಯನಿಕ ಅಸ್ತ್ರಗಳ ಬಳಕೆಗೆ ರಷ್ಯಾ ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಉಕ್ರೇನ್‌ನಲ್ಲಿ ಜೈವಿಕ ಅಸ್ತ್ರಗಳನ್ನು ಉತ್ಪಾದಿಸುತ್ತಿದ್ದು, ಪುರಾವೆಗಳನ್ನು ನಾಶಪಡಿಸಿದೆ : ರಷ್ಯಾ
ಗುರುವಾರವಷ್ಟೇ ಮಾತನಾಡಿದ್ದ ಶ್ವೇತಭವನದ ವಕ್ತಾರೆ ಜೆನ್ ಪ್ಸಾಕಿ ಅವರು ಸುದ್ದಿಗೋಷ್ಠಿ ನಡೆಸಿ, ಉಕ್ರೇನ್‌ನಲ್ಲಿ ರಷ್ಯಾ ಯಾವ ರೀತಿಯ ಶಸ್ತ್ರಗಳನ್ನು ಬಳಸಿದರೂ ಅಲ್ಲಿಗೆ ಸೈನ್ಯವನ್ನು ಕಳುಹಿಸುವ ಉದ್ದೇಶವನ್ನು ಅಮೆರಿಕ ಹೊಂದಿಲ್ಲ ಎಂದು ಹೇಳಿದ್ದರು ಎಂದು ಸ್ಪುಟ್ನಿಕ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಮಧ್ಯೆ ಬೈಡನ್ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಈ ವೇಳೆ ಉಕ್ರೇನಿಯನ್ ಜನರಿಗೆ ಅಮೆರಿಕದಲ್ಲಿ ಭದ್ರತೆ, ಮಾನವೀಯ ಮತ್ತು ಆರ್ಥಿಕ ನೆರವು ಕುರಿತು ಚರ್ಚಿಸಲಾಗಿದೆ.