ಜಿನೆವಾ: ಅಸಮಾನವಾದ ಕೋವಿಡ್ -19 ಲಸಿಕೆ ನೀತಿಗಳಿಂದಾಗಿ 'ಜಗತ್ತು ದುರಂತದ ನೈತಿಕ ವೈಫಲ್ಯ'ವನ್ನು ಎದುರಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಬಡ ರಾಷ್ಟ್ರಗಳ ದುರ್ಬಲ, ವೃದ್ಧ ಜನರ ಮುಂದೆ ಶ್ರೀಮಂತ ರಾಷ್ಟ್ರಗಳಲ್ಲಿನ ಯುವಜನತೆ ಹಾಗೂ ಆರೋಗ್ಯವಂತ ಜನರು ಲಸಿಕೆ ಪಡೆಯುವುದು ನ್ಯಾಯವಲ್ಲ. 49 ಶ್ರೀಮಂತ ದೇಶಗಳಲ್ಲಿ 39 ಮಿಲಿಯನ್ಗೂ ಹೆಚ್ಚಿನ ಲಸಿಕೆಗಳನ್ನು ವಿತರಸಿಲಾಗಿದೆ. ಆದರೆ ಒಂದು ಬಡ ರಾಷ್ಟ್ರವು ಕೇವಲ 25 ಡೋಸ್ಗಳನ್ನು ಮಾತ್ರ ಹೊಂದಿದೆ. ಜಗತ್ತು ದುರಂತದ ನೈತಿಕ ವೈಫಲ್ಯವನ್ನು ಎದುರಿಸುತ್ತಿರುವುದನ್ನು ಇದು ತೋರಿಸುತ್ತದೆ ಎಂದರು.
ಇದನ್ನೂ ಓದಿ: ವ್ಯಾಕ್ಸಿನ್ ವಿಚಾರದಲ್ಲಿ ವೈದ್ಯರ ಅಸಮಾಧಾನ: ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ಯಾಕೆ..?
ಈವರೆಗೆ ಚೀನಾ, ಭಾರತ, ರಷ್ಯಾ, ಇಂಗ್ಲೆಂಡ್ ಮತ್ತು ಅಮೆರಿಕ ಕೋವಿಡ್ ಲಸಿಕೆಗಳನ್ನು ಅಭಿವೃದ್ಧಿಪಡಿಸಿವೆ. ಈ ಎಲ್ಲಾ ರಾಷ್ಟ್ರಗಳು ಜನಸಂಖ್ಯೆಗೆ ಅನುಗುಣವಾಗಿ ವಿತರಣೆಗೆ ಆದ್ಯತೆ ನೀಡಿವೆ. ಆದರೆ, ಲಸಿಕೆ ವಿತರಣೆಯಲ್ಲಿ ಸಮಾನತೆಯಿಲ್ಲ. ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನ ಬರುವ ಹೊತ್ತಿಗೆ, ವಿಶ್ವದ ಬಡ ದೇಶಗಳಲ್ಲಿ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆಗಳನ್ನು ನೀಡಿರುವಂತೆ ಡಬ್ಲ್ಯುಹೆಚ್ ಸೂಚಿಸಿದೆ.
ಮುಂದಿನ ತಿಂಗಳು ಪ್ರಾರಂಭವಾಗಲಿರುವ ಜಾಗತಿಕ ಲಸಿಕೆ ಹಂಚಿಕೆ ಯೋಜನೆ 'ಕೊವಾಕ್ಸ್'ಗೆ ಸಂಪೂರ್ಣ ಬದ್ಧತೆ ನೀಡಬೇಕೆಂದು ಟೆಡ್ರೊಸ್ ಕರೆ ನೀಡಿದ್ದಾರೆ. ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ವಿಶ್ವದ ಅತಿದೊಡ್ಡ ಲಸಿಕೆ ಖರೀದಿದಾರರಾಗಿದ್ದು, ಸುಮಾರು 100 ದೇಶಗಳ ಕೊರೊನಾ ವಿರುದ್ಧದ ಹೋರಾಟಕ್ಕೆ ವಾರ್ಷಿಕ 2 ಬಿಲಿಯನ್ ಡೋಸ್ ನೀಡಲು ವಿವಿಧ ಲಸಿಕೆಗಳನ್ನು ಸಂಗ್ರಹಿಸುತ್ತಿದೆ.