ಜಿನೆವಾ: ಇಲ್ಲಿಯವರೆಗೆ ಲಭ್ಯವಾಗಿರುವ ಎಲ್ಲ ಪುರಾವೆಗಳ ಪ್ರಕಾರ ಕೊರೊನಾ ವೈರಸ್ ನೈಸರ್ಗಿಕ ಪ್ರಾಣಿ ಮೂಲದಿಂದ ಬಂದಿದ್ದು, ಕೃತಕ ಸೃಷ್ಟಿ ವೈರಸ್ ಅಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಮೊದಲು ಮಾನವನಲ್ಲಿ ಪತ್ತೆಯಾದ ಕೊರೊನಾ ವೈರಸ್, ಚೀನಾ ಮತ್ತು ಪ್ರಂಚದ ಇತರ ಭಾಗದ ಜನರಲ್ಲಿ ಪತ್ತೆಯಾದ ಕೊರೊನಾ ವೈರಸ್ನ ಅನುವಂಶಿಕ ಅನುಕ್ರಮವನ್ನು ನೋಡಿದಾಗ ಇವು ಬಾವಲಿಗಳ ಮೂಲದಿದ ಬಂದಿರುವುದು ಪತ್ತೆಯಾಗಿದೆ ಎಂದು ಹೇಳಿದೆ.
ಕೊರೊನಾ ವೈರಸ್ ಅನ್ನು ಜನವರಿ ಆರಂಭದಲ್ಲಿ ಗುರುತಿಸಲಾಯಿತು. ಅದರ ಅನುವಂಶಿಕ ಅನುಕ್ರಮವನ್ನು ಜನವರಿ 11 ಮತ್ತು 12 ರಂದು ಸಾರ್ವಜನಿಕವಾಗಿ ಹಂಚಿಕೊಳ್ಳಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಮಧ್ಯಂತರ ವಾಹಕದ ಮೂಲವನ್ನು ಗುರುತಿಸಲಾಗಿಲ್ಲವಾದರೂ, ಲಭ್ಯವಿರುವ ಎಲ್ಲ ಪುರಾವೆಗಳು ಕೊರೊನಾ ವೈರಸ್ ಕೃತಕ ಸೃಷ್ಟಿಯಲ್ಲ ಎಂದು ತಿಳಿದು ಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಚೀನಾದಲ್ಲಿ ಕಾಣಿಸಿಕೊಂಡ ಈ ಸೋಂಕಿನ ಮೂಲವನ್ನು ತಿಳಿಯಲು ಅನೇಕ ತನಿಖೆಗಳು ನಡೆಯುತ್ತಿವೆ ಎಂದಿದೆ. ಶುಕ್ರವಾರ ಬೆಳಗ್ಗೆ ಹೊತ್ತಿಗೆ ಪ್ರಪಂಚದಾದ್ಯಂತ 27 ಲಕ್ಷಕ್ಕೂ ಅಧಿಕ ಜನರಲ್ಲಿ ಕೊರನಾ ಸೋಂಕು ಕಾಣಿಸಿಕೊಂಡಿದ್ದು, 1 ಲಕ್ಷದ 90 ಸಾವಿರ ಸಾವು ಸಂಭವಿಸಿವೆ.