ಬೀಜಿಂಗ್(ಚೀನಾ): ಉಕ್ರೇನ್ ಗಡಿ ಬಿಕ್ಕಟ್ಟು ತಲೆದೋರಿರುವ ಮಧ್ಯೆಯೇ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇದೇ ವಾರದಲ್ಲಿ ವರ್ಚುಯಲ್ ಸಭೆಯಲ್ಲಿ ಎದುರಾಗಲಿದ್ದಾರೆ. ಈ ವೇಳೆ ದ್ವಿಪಕ್ಷೀಯ ಸಂಬಂಧಗಳು ಮತ್ತು ಅಂತಾರಾಷ್ಟ್ರೀಯ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
ಈ ಬಗ್ಗೆ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಮಾಹಿತಿ ನೀಡಿದ್ದು, ಬುಧವಾರ ನಡೆಯಲಿರುವ ವರ್ಚುವಲ್ ಸಭೆಯಲ್ಲಿ ಚೀನಾ - ರಷ್ಯಾ ನಡುವಿನ ಸಂಬಂಧಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಹಕಾರದ ಬಗ್ಗೆ ಪ್ರಸ್ತಾಪವಾಗಲಿದೆ. ದ್ವಿಪಕ್ಷೀಯ ಸಂಬಂಧಗಳ ಅಭಿವೃದ್ಧಿಯ ಬಗ್ಗೆಯೂ ಉಭಯ ನಾಯಕರು ಚರ್ಚೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಜೀ ಬೈಡನ್ ಕಳೆದ ವಾರ ರಷ್ಯಾಗೆ ಎಚ್ಚರಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ರಷ್ಯಾ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಯೂರಿ ಉಶಕೋವ್, ರಷ್ಯಾದ ಪಡೆಗಳು ತಮ್ಮದೇ ದೇಶದ ಗಡಿಯಲ್ಲಿವೆ. ಯಾವ ದೇಶಕ್ಕೂ ಬೆದರಿಕೆ ಹಾಕುತ್ತಿಲ್ಲ ಎಂದು ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ಸ್ಪೇಸ್ ಎಕ್ಸ್, ಟೆಸ್ಲಾ ಸಿಇಒ ಎಲಾನ್ ಮಸ್ಕ್ ಟೈಮ್ ನಿಯತಕಾಲಿಕೆಯ 'ವರ್ಷದ ವ್ಯಕ್ತಿ'
ಅಮೆರಿಕದ ವಿರುದ್ಧ ಅಂತಾರಾಷ್ಟ್ರೀಯ, ಆರ್ಥಿಕ ಮತ್ತು ರಾಜಕೀಯ ಪ್ರಾಬಲ್ಯವನ್ನು ಎದುರಿಸಲು ಚೀನಾ ಮತ್ತು ರಷ್ಯಾ ವಿದೇಶಿ ನೀತಿಗಳಲ್ಲಿ ಒಪ್ಪಂದ ಮಾಡಿಕೊಂಡಿವೆ. ಈ ಹಿನ್ನೆಲೆಯಲ್ಲಿ ಈ ವಾರ ನಡೆಯುವ ಸಭೆ ಮಹತ್ವ ಪಡೆದುಕೊಂಡಿದೆ.