ವಾಷಿಂಗ್ಟನ್: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ವರ್ಚುಯಲ್ ಸಂಭಾಷಣೆ ನಡೆಸಿದರು. ಉಕ್ರೇನ್ - ರಷ್ಯಾ ಯುದ್ಧದ ಹಿನ್ನೆಲೆಯಲ್ಲಿ ಬೈಡನ್ ಚೀನಾ ಅಧ್ಯಕ್ಷರ ಜೊತೆ ಈ ವಿಡಿಯೋ ಕಾಲ್ ಮೂಲಕ ಮಾತುಕತೆ ನಡೆಸಿದರು. ರಷ್ಯಾ ದಾಳಿಗೆ ಉಕ್ರೇನ್ ನಗರಗಳು ಸ್ಮಶಾನವಾಗುತ್ತಿವೆ, ನಾಗರಿಕರು ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗುತ್ತಿದ್ದಾರೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಚೀನಾ ರಷ್ಯಾಕ್ಕೆ ಮಿಲಿಟರಿ ಹಾಗೂ ವಾಣಿಜ್ಯ ಸಂಬಂಧಗಳ ಮೂಲಕ ನೆರವು ನೀಡಿದರೆ ಪರಿಸ್ಥಿತಿ ಇನ್ನೂ ವಿಕೋಪಕ್ಕೆ ಹೋಗಲಿವೆ ಎಂದು ಚೀನಾ ಅಧ್ಯಕ್ಷರಿಗೆ ಬೈಡನ್ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು ಎಂದು ಶ್ವೇತಭವನದ ಮೂಲಗಳು ಹೇಳಿವೆ.
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಬಗ್ಗೆ ಉಭಯ ನಾಯಕರ ನಡುವೆ ಸುಮಾರು ಎರಡು ಗಂಟೆಗಳ ಸುದೀರ್ಘ ಚರ್ಚೆ ನಡೆಯಿತು ಎಂದು ಶ್ವೇತಭವನ ತಿಳಿಸಿದೆ. ಅಧ್ಯಕ್ಷ ಬೈಡನ್ ರಷ್ಯಾದ ಮೇಲೆ ಆರ್ಥಿಕ ದಿಗ್ಬಂಧನ ಹೇರಿರುವ ಬಗ್ಗೆ ವಿವರಣೆ ನೀಡಿದರು. ಉಕ್ರೇನಿಯನ್ ನಗರಗಳು ಮತ್ತು ನಾಗರಿಕರ ವಿರುದ್ಧ ಕ್ರೂರ ದಾಳಿ ನಡೆಸುತ್ತಿರುವ ರಷ್ಯಾಕ್ಕೆ ನೀವು (ಚೀನಾ) ಬೆಂಬಲ ನೀಡಿದಲ್ಲಿ ಹೆಚ್ಚಿನ ಪರಿಣಾಮಗಳು ಉಂಟಾಗಲಿವೆ ಬೈಡನ್ ವಿವರಿಸಿದ್ದಾರೆ.
ಓದಿ: ನೀರಿನ ಟ್ಯಾಂಕ್ ಖಾಲಿ ಮಾಡಿ ಮನೆಗೆ ಬೆಂಕಿಯಿಟ್ಟ ತಂದೆ.. ಮಗ, ಸೊಸೆ, ಮೊಮ್ಮಕ್ಕಳಿಬ್ಬರು ಸುಟ್ಟು ಭಸ್ಮ!
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಈ ಬಗ್ಗೆ ಮಾತನಾಡಿ, ಸುಮಾರು ಎರಡು ಗಂಟೆಗಳ ಕಾಲ ಚೀನಾ ಅಧ್ಯಕ್ಷರೊಂದಿಗೆ ಬೈಡನ್ ಮಾತುಕತೆ ನಡೆಸಿದ್ದು, ಅಮೆರಿಕ ಹಾಗೂ ಅದರ ಮಿತ್ರರಾಷ್ಟ್ರಗಳು ಕೈಗೊಂಡಿರುವ ಕ್ರಮ ಹಾಗೂ ನಿಲುವುಗಳ ಬಗ್ಗೆ ಕ್ಸಿ ಅವರಿಗೆ ವಿವರಣೆ ನೀಡಿದರು. ಅಷ್ಟೇ ಅಲ್ಲ ರಷ್ಯಾ ನೆರವಿಗೆ ನಿಲ್ಲಬೇಡಿ ಎಂಬ ಮನವಿಯನ್ನೂ ಮಾಡಿದರು. ಈ ಮನವಿ ಮೂಲಕ ರಷ್ಯಾಕ್ಕೆ ಬೆಂಬಲ ನೀಡಿದರೆ ಆಗುವ ಅನಾಹುತಗಳ ಬಗ್ಗೆಯೂ ಕ್ಸಿ ಅವರಿಗೆ ಮನವರಿಕೆ ಮಾಡಿಕೊಟ್ಟರು ಎಂದು ಪ್ಸಾಕಿ ಹೇಳಿದರು.
ಓದಿ: ಮೊರಾಕೊಗೆ ಅಮೆರಿಕ ರಾಯಭಾರಿಯಾಗಿ ಭಾರತೀಯ ಮೂಲದ ಪುನೀತ್ ತಲ್ವಾರ್ ನೇಮಕ
ಇದೇ ವೇಳೆ ತೈವಾನ್ ಬಗ್ಗೆಯೂ ಬೈಡನ್ ತಮ್ಮ ಮಾತುಕತೆ ವೇಳೆ ಪ್ರಸ್ತಾಪಿಸಿದರು. ಈ ವೇಳೆ ಚೀನಾ ಅಧ್ಯಕ್ಷ ಕ್ಸಿ ಮಾತನಾಡಿ ತಾವು ಏಕ ಚೀನಾ ನೀತಿಗೆ ಬದ್ಧ ಇರುವುದಾಗಿ ಸ್ಪಷ್ಟಪಡಿಸಿದರು ಎಂದು ಪ್ಸಾಕಿ ಮಾಹಿತಿ ನೀಡಿದ್ದಾರೆ.