ಕೊಲಂಬೊ (ಶ್ರೀಲಂಕಾ): ರಾಜಧಾನಿ ಕೊಲಂಬೋದ ಹೊರವಲಯದಲ್ಲಿರುವ ಮಹಾರಾ ಕಾರಾಗೃಹದಲ್ಲಿ ಕೈದಿಗಳ ಮತ್ತು ಜೈಲಾಧಿಕಾರಿಗಳ ನಡುವೆ ಘರ್ಷಣೆ ನಡೆದಿದೆ. ಗಲಾಟೆಯಲ್ಲಿ 8 ಕೈದಿಗಳು ಮೃತಪಟ್ಟಿದ್ದಾರೆ. 50ಕ್ಕೂ ಹೆಚ್ಚು ಇತರೆ ಕೈದಿಗಳು ಸೇರಿದಂತೆ ಜೈಲಾಧಿಕಾರಿಗಳು ಸಹ ಗಾಯಗೊಂಡಿದ್ದಾರೆ ಎಂಬ ವರದಿ ಬಂದಿದೆ.
ಭಾನುವಾರ ಮಧ್ಯಾಹ್ನ ಮಹಾರಾ ಕಾರಾಗೃಹದಲ್ಲಿ ಕೈದಿಗಳ ಗುಂಪೊಂದು ಇದ್ದಕ್ಕಿದ್ದಂತೆ ಜೈಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿತ್ತು. ಸ್ಥಳದಲ್ಲಿದ್ದ ಜೈಲಾಧಿಕಾರಿಗಳು ಅವರನ್ನು ತಡೆದಿದ್ದಾರೆ. ಈ ವೇಳೆ ಕೈದಿಗಳು ಜೈಲಾಧಿಕಾರಿಗಳೊಂದಿಗೆ ಗಲಾಟೆಗೆ ಇಳಿದಿದ್ದಾರೆ. ಘರ್ಷಣೆ ಹಾಗೂ ಕೈದಿಗಳ ಧಂಗೆಯನ್ನು ಹತ್ತಿಕ್ಕಲು ಜೈಲು ಅಧಿಕಾರಿಗಳು ಕೈದಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ವಕ್ತಾರ ಅಜಿತ್ ರೋಹನಾ ತಿಳಿಸಿದ್ದಾರೆ.
ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಕೆಲಾನಿಯಾ ಎಸ್‌ಎಸ್‌ಪಿ, ರಾಗಮಾ ಒಐಸಿ ಮತ್ತು ವಿಶೇಷ ಪೊಲೀಸ್ ಕಾರ್ಯಪಡೆ ನೇತೃತ್ವದ ಐದು ತಂಡಗಳನ್ನು ಜೈಲು ಅಧಿಕಾರಿಗಳೊಂದಿಗೆ ನಿಯೋಜಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಘರ್ಷಣೆ ಹಾಗೂ ಗುಂಡಿನ ದಾಳಿಯಲ್ಲಿ ಎಂಟು ಜನ ಕೈದಿಗಳು ಮೃತಪಟ್ಟಿದ್ದಾರೆ. ನಮ್ಮ ಸಿಬ್ಬಂದಿ ಸೇರಿದಂತೆ 50ಕ್ಕೂ ಹೆಚ್ಚು ಕೈದಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.
ಇದನ್ನೂ ಓದಿ: ಸೆಂಟ್ರಲ್ ಜೈಲಿನಲ್ಲಿ ಗಾಂಜಾ ಮಾರಾಟ ಆರೋಪ: ಅಧಿಕಾರಿಗಳ ವಿರುದ್ಧ ಗೃಹ ಇಲಾಖೆ ಗರಂ
ಸಚಿವಾಲಯದ ಕಾರ್ಯದರ್ಶಿ ಡಾ.ಸುದರ್ಶಿನಿ ಫರ್ನಾಂಡೊಪುಲ್ಲೆ ಅವರ ನೇತೃತ್ವದಲ್ಲಿ ಈ ಬಗ್ಗೆ ವಿಚಾರಣೆ ನಡೆಸಲಾಗುತ್ತದೆ ಎಂದು ಜೈಲು ಸುಧಾರಣೆ ಮತ್ತು ಕೈದಿಗಳ ಪುನರ್ವಸತಿ ರಾಜ್ಯ ಸಚಿವರು ಕೊಲಂಬೊ ಸಂಸತ್ತಿನಲ್ಲಿ ತಿಳಿಸಿದ್ದಾರೆ. ಗಲಭೆಯ ಸತ್ಯಾ-ಸತ್ಯತೆ ಬಯಲಿಗೆ ತರಲು ಪ್ರಕರಣವನ್ನು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಹಸ್ತಾಂತರಿಸಲಾಗುವುದು ಎಂದೂ ಅವರು ಹೇಳಿದ್ದಾರೆ.