ಕೀವ್(ಉಕ್ರೇನ್) : ರಷ್ಯಾ ಪಡೆಗಳು ಉಕ್ರೇನ್‌ನ ಹಲವಾರು ನಗರಗಳ ಮೇಲೆ ದಾಳಿ ನಡೆಸಿವೆ. ಇದಕ್ಕೆ ಪ್ರತಿಯಾಗಿ ಉಕ್ರೇನ್ ಕೂಡಾ ಪ್ರತಿದಾಳಿ ನಡೆಸಿದ್ದು, ಈ ಹಿನ್ನೆಲೆಯಲ್ಲಿ 40ಕ್ಕೂ ಹೆಚ್ಚು ಉಕ್ರೇನಿಯನ್ ಸೈನಿಕರು ಮತ್ತು 50ಕ್ಕೂ ಹೆಚ್ಚು ರಷ್ಯಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಸೈನಿಕರು ಮಾತ್ರವಲ್ಲದೇ ರಷ್ಯಾ ಉಕ್ರೇನ್‌ನ ಒಡೆಸ್ಸಾದಲ್ಲಿ ನಡೆಸಿದ ಕ್ಷಿಪಣಿ ದಾಳಿಯಲ್ಲಿ 18 ನಾಗರಿಕರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇದರ ಜೊತೆಗೆ ಆಧುನಿಕ ಶಸ್ತ್ರಾಸ್ತ್ರಗಳ ಮೂಲಕ ಉಕ್ರೇನ್‌ನ ವಾಯುನೆಲೆಗಳನ್ನು ನಾಶಪಡಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೊಂಡರೆ, ರಷ್ಯಾದ ಐದು ವಿಮಾನಗಳು ಮತ್ತು ಒಂದು ಹೆಲಿಕಾಪ್ಟರ್ ಅನ್ನು ಉರುಳಿಸಿದ್ದೇವೆ ಎಂದು ಉಕ್ರೇನ್‌ನ ಸೇನಾ ಸಿಬ್ಬಂದಿ ಹೇಳಿಕೊಂಡಿದ್ದಾರೆ. ಆದರೆ ರಷ್ಯಾ ಉಕ್ರೇನ್‌ನ ಹೇಳಿಕೆಯನ್ನು ನಿರಾಕರಿಸಿದೆ.
ಉಕ್ರೇನ್‌ನ ಸಚಿವರಾದ ಆಂಟನ್ ಗೆರಾಶ್ಚೆಂಕೊ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಉಕ್ರೇನ್‌ನ ಮಿಲಿಟರಿ ಪ್ರಧಾನ ಕಚೇರಿ, ವಿಮಾನ ನಿಲ್ದಾಣಗಳು, ಉಕ್ರೇನ್ ರಾಜಧಾನಿಯಾದ ಕೀವ್, ಮುಂತಾದ ಸ್ಥಳಗಳ ಮೇಲೆ ರಷ್ಯಾ ಆಕ್ರಮಣ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನಾವು ಬಲಿಷ್ಠರಾಗಿದ್ದು, ಗೆಲುವು ನಮಗೇ ದೊರಕಲಿದೆ : ಉಕ್ರೇನ್ ಅಧ್ಯಕ್ಷರ ಭಾವನಾತ್ಮಕ ಭಾಷಣ
ಸ್ಥಳೀಯ ಮಾಧ್ಯಮಗಳ ಪ್ರಕಾರ ಕೀವ್‌ನಲ್ಲಿ ಬಾಂಬ್ ಸ್ಫೋಟಗಳೂ ನಡೆದಿವೆ. ರಾಜಧಾನಿಯ ವಿಮಾನ ನಿಲ್ದಾಣದ ಬಳಿ ಗುಂಡಿನ ಸದ್ದು ಕೇಳಿ ಬಂದಿದೆ ಎಂದು ವರದಿಗಳಲ್ಲಿ ಉಲ್ಲೇಖವಾಗಿದೆ.