ಮಾಸ್ಕೋ: ಮಹಾಮಾರಿ ಕೊರೊನಾ ವೈರಸ್‌ನಿಂದ ತತ್ತರಿಸಿ ಹೋಗಿರುವ ಕೋಟ್ಯಂತರ ಮಂದಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್ ವಿ ಲಸಿಕೆಯನ್ನು ಸೋಂಕಿತ ನಾಗರಿಕರ ಬಳಕೆಗಾಗಿ ಉತ್ಪಾದಿಸಲಾಗುತ್ತಿದೆ ಎಂದು ರಷ್ಯಾದ ಆರೋಗ್ಯ ಸಚಿವಾಲಯದ ಹೇಳಿಕೆಯನ್ನು ಆಧರಿಸಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಶೀಘ್ರದಲ್ಲೇ ಈ ಔಷಧಿ ರಷ್ಯಾದ ಜನತೆಗೆ ಸಿಗಲಿದೆ ಎಂದು ಹೇಳಿದೆ. ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸೂಕ್ಷ್ಮಜೀವ ವಿಜ್ಞಾನದ ಗಮಲೆಯಾ ಸಂಶೋಧನಾ ಸಂಸ್ಥೆ ಕೋವಿಡ್‌ಗಾಗಿ ಗಮ್ - ಕೋವಿಡ್- ವ್ಯಾಕ್ (ಸ್ಪುಟ್ನಿಕ್ ವಿ) ಎಂಬ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಇದಕ್ಕೆ ಅಲ್ಲಿನ ಆರೋಗ್ಯ ಸಚಿವಾಲಯ ಅಗತ್ಯವಾದ ಗುಣಮಟ್ಟ ಪರೀಕ್ಷೆ ಮತ್ತು ನಾಗರಿಕರಿಗೆ ಲಸಿಕೆ ಪೂರೈಕೆಗಾಗಿ ಅನುಮತಿ ನೀಡಿತ್ತು.
ಈ ಬಗ್ಗೆ ಮಾಹಿತಿ ನೀಡಿರುವ ರಷ್ಯಾದ ಆರೋಗ್ಯ ಸಚಿವ ಮಿಖೈಲ್ ಮುರಾಶ್ಕೋ, ಶೀಘ್ರದಲ್ಲೇ ಮೊದಲ ಹಂತದ ವ್ಯಾಕ್ಸಿನ್ ಪೂರೈಕೆಯಾಗಲಿದೆ. ಮೊದಲಿಗೆ ಅತ್ಯಂತ ಕಠಿಣ ಪರಿಸ್ಥಿತಿ ಎದುರಿಸುತ್ತಿರುವ ಶಿಕ್ಷಕರು ಮತ್ತು ವೈದ್ಯರಿಗೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೇ ಅಧ್ಯಯನವೊಂದು ರಷ್ಯಾದ ಕೋವಿಡ್ ಲಸಿಕೆಯಿಂದ ಯಾವುದೇ ರೀತಿಯ ಗಂಭೀರವಾದ ಅಡ್ಡ ಪರಿಣಾಮಗಳು ಇರುವುದಿಲ್ಲ ಎಂದು ವರದಿ ಮಾಡಿತ್ತು.