ದೋಹಾ (ಕತಾರ್): ಅಪಘಾನಿಸ್ತಾನದಲ್ಲಿ ಕಳೆದ ಎರಡು ದಶಕಗಳಿಂದ ನಡೆಯುತ್ತಿರುವ ಸಮರಕ್ಕೆ ಪೂರ್ಣ ವಿರಾಮವಿಟ್ಟು, ಶಾಶ್ವತವಾಗಿ ಶಾಂತಿ ನೆಲೆಸುವಂತೆ ಮಾಡುವ ತಾಲಿಬಾನ್ ಮತ್ತು ಅಮೆರಿಕ ದೇಶದ ನಡುವಿನ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಕೊನೆಗೂ ಸಹಿ ಬಿದ್ದಿದೆ.
ಅಮೆರಿಕ ರಾಯಭಾರಿ ಜಲ್ಮೇ ಖಲೀಲ್ಜಾದ್ ಮತ್ತು ತಾಲಿಬಾನ್ ಉಪಾಧ್ಯಕ್ಷ ಮುಲ್ಲಾ ಅಬ್ದುಲ್ ಘನಿ ಅವರು ಕತಾರ್‌ನ ದೋಹಾರ್‌ನಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿ ಬಹು ನಿರೀಕ್ಷಿತ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಸಹಿಗೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಸಾಕ್ಷಿಯಾದರು.
ಒಪ್ಪಂದದ ಸಭೆಯಲ್ಲಿ ಭಾರತ ಸೇರಿ 30 ರಾಷ್ಟ್ರಗಳ ರಾಯಭಾರಿಗಳು ಭಾಗವಹಿಸಿದ್ದರು. ಪ್ರಸ್ತುತ ಅಫ್ಘಾನಿಸ್ತಾನದಲ್ಲಿ ಅಮೆರಿಕಾದ 13 ಸಾವಿರ ಸೇನಾ ತುಕಡಿಗಳಿದ್ದು, ಈ ಒಪ್ಪಂದದ ಪ್ರಕಾರ ಅಮೆರಿಕ ಇದನ್ನು 8,600ಕ್ಕೆ ಇಳಿಸಿದ್ದು, ಉಳಿದ ಸೇನಾ ಪಡೆಯನ್ನ ಹಿಂತೆಗೆದುಕೊಳ್ಳಲಿದೆ.