ಕಾಬೂಲ್ : ಅಫ್ಘನ್ ಮಹಿಳೆಯರನ್ನು ನೆರೆಯ ರಾಷ್ಟ್ರಗಳಿಗೆ ಶವಪೆಟ್ಟಿಗೆಯಲ್ಲಿ ರವಾನಿಸಲಾಗುತ್ತಿದ್ದು, ಲೈಂಗಿಕ ಗುಲಾಮರಂತೆ ಬಳಸಲಾಗುತ್ತಿದೆ ಎಂದು ಮಾಜಿ ನ್ಯಾಯಾಧೀಶರೊಬ್ಬರು ತಿಳಿಸಿದ್ದಾರೆ.
ಜೀವ ಉಳಿಸಿಕೊಳ್ಳುವ ಸಲುವಾಗಿ ತಾಲಿಬಾನ್‌ನಿಂದ ಅಮೆರಿಕಕ್ಕೆ ಬಂದಿರುವ ನಜ್ಲಾ ಅಯೌಬಿ, ಆಗಸ್ಟ್ 15ರಿಂದ ಅಫ್ಘನ್ನಲ್ಲಿ ತಾಲಿಬಾನ್ ಹಿಡಿತ ಸಾಧಿಸಿದ್ದು, ಮಹಿಳೆಯರ ಮೇಲಿನ ದೌರ್ಜನ್ಯ ಭೀತಿ ಸೃಷ್ಟಿಸಿದೆ.
ಅಡುಗೆ ಸರಿಯಾಗಿ ಮಾಡಿಲ್ಲವೆಂದು ಉಗ್ರರು, ಓರ್ವ ಮಹಿಳೆಗೆ ಬೆಂಕಿ ಹಚ್ಚಿದರು. ಇತರ ಯುವತಿಯರನ್ನು ಬಲವಂತವಾಗಿ ಮದುವೆಗೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ತಾಲಿಬಾನ್ ಉಗ್ರರು, ಅವರಿಗೆ ಅಡುಗೆ ಮಾಡಲು ಜನರನ್ನು ಒತ್ತಾಯಿಸುತ್ತಿದ್ದಾರೆ. ಅಡುಗೆ ಸರಿಯಾಗಿ ಮಾಡದಿದ್ದರೆ ಅವರನ್ನು ಹಿಂಸಿಸಿ ಕೊಲ್ಲಲಾಗುತ್ತದೆ, ಅನೇಕ ಯುವತಿಯರನ್ನು ಶವಪೆಟ್ಟಿಗೆಯಲ್ಲಿರಿಸಿ ಇತರೆ ದೇಶಗಳಿಗೆ ರವಾನಿಸಲಾಗುತ್ತದೆ ಎಂದು ಹೇಳಿದರು. ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳನ್ನು ಉಗ್ರರಿಗೆ ಮದುವೆ ಮಾಡಿಕೊಡುವಂತೆ ಕುಟುಂಬಗಳನ್ನು ಒತ್ತಾಯಿಸುತ್ತಿದ್ದಾರೆ.
ಇಷ್ಟೆಲ್ಲ ಕ್ರೂರತ್ವ ಮೆರೆಯುತ್ತಿರುವ ತಾಲಿಬಾನ್ ಉಗ್ರರು, ನಾವು ಮಹಿಳೆಯರ ಹಕ್ಕುಗಳನ್ನು ಗೌರವಿಸುತ್ತೇವೆ, ಶಿಕ್ಷಣ ಪಡೆಯಲು ಅನುಮತಿ ನೀಡುತ್ತೇವೆ ಎಂದು ಹೇಳಿದ್ದಾರೆ. ಇದು ಎಷ್ಟರ ಮಟ್ಟಿಗೆ ನಿಜವಾಗುತ್ತದೋ ಗೊತ್ತಿಲ್ಲ ಎಂದು ನಜ್ಲಾ ಆತಂಕ ವ್ಯಕ್ತಪಡಿಸಿದ್ದಾರೆ.
ಅನೇಕ ಮಹಿಳೆಯರು ಈಗ ತಲೆ ಮರೆಸಿಕೊಂಡಿದ್ದು, ಅವರ ಕುಟುಂಬಸ್ಥರು ಭಯದಿಂದ ಬದುಕುತ್ತಿದ್ದಾರೆ. ಆದರೆ, ಸದ್ಯದ ಭೀಕರ ಪರಿಸ್ಥಿತಿಯಿಂದ ಹೊರ ಬರಲು ಯಾವುದೇ ಮಾರ್ಗವಿಲ್ಲ ಎಂದು ಅವರು ಹೇಳಿದರು. ಕೆಲವೇ ದಿನಗಳ ಹಿಂದೆ ಬುರ್ಖಾ ಧರಿಸದ ಹಿನ್ನೆಲೆ, ಮಹಿಳೆಯೊಬ್ಬಳಿಗೆ ಗುಂಡು ಹಾರಿಸಿ ಕೊಲ್ಲಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಮೊದಲ 'ಫತ್ವಾ'ದಲ್ಲೇ ಬುದ್ಧಿ ತೋರಿಸಿದ ತಾಲಿಬಾನ್.. ವಿಶ್ವವಿದ್ಯಾನಿಲಯಗಳಲ್ಲಿ 'ಸಹ-ಶಿಕ್ಷಣ' ನಿಷೇಧ..