ಇಂಡೋನೇಷ್ಯಾ: ಇಂಡೋನೇಷ್ಯಾದ ಮಾಜಿ ಅಧ್ಯಕ್ಷ ಸುಕರ್ಣೋ ಅವರ ಪುತ್ರಿ ಸುಕ್ಮಾವತಿ ಸುಕರ್ಣೋಪುತ್ರಿ ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಅಕ್ಟೋಬರ್ 26ರಂದು ಸುಕ್ಮಾವತಿ ಅಧಿಕೃತವಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಿ ಅಗುಂಗ್ ಸಿಂಗರಾಜದಲ್ಲಿ ಸುಕರ್ಣೋ ಸೆಂಟರ್ ಹೆರಿಟೇಜ್ ಏರಿಯಾದಲ್ಲಿ ಧಾರ್ಮಿಕ ವಿಧಿವಿಧಾನದಂತೆ ಸಮಾರಂಭ ಆಯೋಜಿಸಲಾಗಿದ್ದು, ಇಲ್ಲೇ ಅವರು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲಿದ್ದಾರೆ ಎಂದು ಇಂಡೋನೇಷ್ಯಾದ ಸುದ್ದಿಸಂಸ್ಥೆ ವರದಿ ಮಾಡಿದೆ.
ಸುಕ್ಮಾವತಿ ಸುಕರ್ಣೋಪುತ್ರಿ (70) ಅವರು ಸುಕರ್ಣೋ ಅವರ ಮೂರನೇ ಮಗಳು ಮತ್ತು ಮಾಜಿ ಅಧ್ಯಕ್ಷೆ ಮೇಗಾವತಿ ಸುಕರ್ಣೋಪುತ್ರಿಯ ತಂಗಿ ಕೂಡ ಹೌದು. 2018ರಲ್ಲಿ ಕೆಲವು ಇಸ್ಲಾಮಿಕ್ ಗುಂಪುಗಳು ಸುಕ್ಮಾವತಿ ಸುಕರ್ಣೋಪುತ್ರಿಯ ವಿರುದ್ಧ ಧರ್ಮದ್ರೋಹದ ದೂರು ಸಲ್ಲಿಸಿದ್ದವು. ಆಕೆ ಇಸ್ಲಾಂ ಧರ್ಮವನ್ನು ಅವಮಾನಿಸುವ ಕವಿತೆಯನ್ನು ಓದಿದ್ದಾಳೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂಡೋನೇಷ್ಯಾದ ಮಾಜಿ ಅಧ್ಯಕ್ಷರ ಮಗಳು ಕ್ಷಮೆ ಕೂಡ ಕೇಳಿದ್ದಳು ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಸಂಸ್ಥೆ ವರದಿ ಮಾಡಿತ್ತು.
ಇಂಡೋನೇಷ್ಯಾದಲ್ಲಿ ಇಸ್ಲಾಂ ಅತಿದೊಡ್ಡ ಧರ್ಮವಾಗಿದ್ದು, ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ. ಸುಕ್ಮಾವತಿ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವ ನಿರ್ಧಾರಕ್ಕೆ ಆಕೆಯ ಕುಟುಂಬಸ್ಥರ ಒಪ್ಪಿಗೆ ಇದೆ ಎನ್ನಲಾಗಿದೆ.