ಕರಾಚಿ: ಪಾಕಿಸ್ತಾನದಲ್ಲಿ ಚೀನಾ ಪ್ರಜೆಗಳನ್ನು ಗುರಿಯಾಗಿಸಿ ನಡೆಯುತ್ತಿರುವ ದಾಳಿಗಳು ಮುಂದುವರಿದಿದ್ದು, ಸಂಚರಿಸುತ್ತಿದ್ದ ವಾಹನ ಸಮೀಪ ಆತ್ಮಾಹುತಿ ಬಾಂಬ್ ಸ್ಫೋಟಿಸಿದ್ದರಿಂದ ಇಬ್ಬರು ಮಕ್ಕಳು ಸೇರಿ ಐವರು ಮೃತಪಟ್ಟಿದ್ದಾರೆ. ದಕ್ಷಿಣ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ನಡೆದಿರುವ ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದೊಂದು ತಿಂಗಳಲ್ಲಿ ಚೀನಿಯರನ್ನು ಗುರಿಯಾಗಿಸಿ ನಡೆಯುತ್ತಿರುವ 2ನೇ ದಾಳಿ ಇದಾಗಿದೆ.
ಗ್ವಾಡರ್‌ನ ಬಲೂಚ್ ವಾರ್ಡ್ ಪ್ರದೇಶದಲ್ಲಿ ಹೆಚ್ಚಾಗಿ ಚೀನಾ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಪ್ರದೇಶವನ್ನು ಗುರಿಯಾಗಿಸಿ ದಾಳಿ ನಡೆದಿದೆ ಎಂದು ಅಲ್ಲಿನ ಸರ್ಕಾರಿ ಅಧಿಕಾರಿಗಳು ಹಾಗೂ ಪೊಲೀಸರು ತಿಳಿಸಿದ್ದಾರೆ. ಆತ್ಮಾಹುತಿ ಬಾಂಬರ್ ಚೀನಾ ಪ್ರಜೆಗಳು ತೆರಳುತ್ತಿದ್ದ ವಾಹನದ ಸಮೀಪಕ್ಕೆ ಬಂದು ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಈ ವೇಳೆ ಇಬ್ಬರು ಮಕ್ಕಳು ಸೇರಿ ಐವರು ಮೃತಪಟ್ಟರೆ, ವಾಹನದ ಚಾಲಕ ಸೇರಿ ಹಲವರು ಗಾಯಗೊಂಡಿದ್ದಾರೆ. ಅವರನ್ನು ಜಿಡಿಎ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಲೂಚ್ ಸರ್ಕಾರದ ವಕ್ತಾರ ಲಿಖಾಯತ್ ಶಹವಾನಿ ಸ್ಪಷ್ಟಪಡಿಸಿದ್ದು, ಈ ಘಟನೆಯನ್ನು ಖಂಡಿಸಿದ್ದಾರೆ.
ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಸೇರಿ ವಿವಿಧ ಯೋಜನೆಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಚೀನಾದ ತಜ್ಞರು ಹಾಗೂ ಕಾರ್ಮಿಕರು ಗ್ವಾದರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲಸ ಮಾಡ್ತಿದ್ದಾರೆ. ಕಳೆದ ತಿಂಗಳು ಖೈಬರ್ ಪಖ್ತುಂಖ್ವಾದಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ 9 ಮಂದಿ ಚೀನಿಯರು ಸೇರಿದಂತೆ ಕನಿಷ್ಠ 13 ಜನರು ಸಾವನ್ನಪ್ಪಿದ್ದರು. ನಿನ್ನೆಯ ಘಟನೆಗೆ ಸಂಬಂಧಿಸಿದಂತೆ ಈವರೆಗೆ ಯಾವ ಉಗ್ರ ಸಂಘಟನೆಯೂ ಹೊಣೆ ಹೊತ್ತುಕೊಂಡಿಲ್ಲ.