ಇಸ್ಮಾಯಿಲಿಯಾ: ಬೃಹತ್ ಗಾತ್ರದ ಕಾರ್ಗೋ ಹಡಗು ಈಜಿಫ್ಟ್ನ ಸುಯೇಜ್ ಕಾಲುವೆಯಲ್ಲಿ ಸಿಲುಕಿಕೊಂಡಿರುವುದರಿಂದ ಅಂತಾರಾಷ್ಟ್ರೀಯ ಶಿಪ್ಪಿಂಗ್ ವ್ಯವಸ್ಥೆಗೆ ತೊಂದರೆಯಾಗಿದೆ. ಈ ಜಲ ಮಾರ್ಗದ ಮೂಲಕ ಸಾಗಬೇಕಿದ್ದ ಸುಮಾರು 150 ಹಡಗುಗಳು ಕಾಲುವೆಯಲ್ಲಿ ಸಿಲುಕಿಕೊಂಡಿವೆ. ಇತರ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗಿರುವುದಕ್ಕೆ ಜಪಾನ್ ಮೂಲದ ಹಡಗು ಕಂಪನಿ ಲಿಖಿತ ರೂಪದಲ್ಲಿ ಕ್ಷಮೆ ಯಾಚಿಸಿದೆ.
ಪರಿಸ್ಥಿತಿಯನ್ನು ಆದಷ್ಟು ಬೇಗ ಪರಿಹರಿಸಲು ನಾವು ನಿರಂತರವಾಗಿ ಶ್ರಮಿಸುತ್ತಿದ್ದೇವೆ. ಸುಯೇಜ್ ಕಾಲುವೆಯ ಮೂಲಕ ಸಂಚರಿಸುತ್ತಿದ್ದ ಹಡಗುಗಳು ಮತ್ತು ಪ್ರಯಾಣಿಕರು ಸೇರಿದಂತೆ ಘಟನೆಯಿಂದ ಸಮಸ್ಯೆ ಎದುರಿಸಿದ ಎಲ್ಲರೊಂದಿಗೆ ನಾವು ಕ್ಷಮೆ ಯಾಚಿಸುತ್ತೇವೆ ಎಂದು ಹಡಗು ಕಂಪನಿ ಶೂಯಿ ಕಿಸೆನ್ ಕೈಶಾ ಲಿಮಿಟೆಡ್ ಹೇಳಿದೆ.
ಇದನ್ನೂ ಓದಿ : ಅಂದು ಒಬಾಮ ಅಧ್ಯಕ್ಷರಾಗಿದ್ದಾಗ ಬೈಡನ್ ವಹಿಸಿಕೊಂಡಿದ್ದ ಗುರುತ್ತರ ಜವಾಬ್ದಾರಿ ಈಗ ಹ್ಯಾರಿಸ್ ಹೆಗಲಿಗೆ
ಬುಧವಾರ ರಾತ್ರಿ ಸ್ಥಗಿತಗೊಳಿಸಿದ್ದ ಹಡಗು ತೆರವು ಕಾರ್ಯಾಚರಣೆ ಗುರುವಾರ ಬೆಳಗ್ಗೆ ಮತ್ತೆ ಪ್ರಾರಂಭಿಸಲಾಗಿದೆ ಎಂದು ಈಜಿಪ್ಟ್ ಕಾಲುವೆ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಡಗಿನಿಂದ ಕಂಟೇನರ್‌ಗಳನ್ನು ಅನ್ಲೋಡ್ ಮಾಡದಿರಲು ತೀರ್ಮಾನಿಸಲಾಗಿದೆ. ಯಾಕೆಂದರೆ ಇದರಿಂದ ಕಾರ್ಯಾಚರಣೆ ವಿಳಂಬವಾಗಬಹುದು ಎಂದು ಅವರು ಹೇಳಿದ್ದಾರೆ.
ಟಗ್ ಬೋಟ್ಗಳ ಮೂಲಕ ಹಡಗು ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಹಡಗು ತೆರವುಗೊಳಿಸುವವರೆಗೂ, ಸುಯೇಜ್ ಜಲಮಾರ್ಗದ ಮೂಲಕ ಸಂಚಾರ ನಿರ್ಬಂಧಿಸಲಾಗಿದೆ ಎಂದು ಕಾಲುವೆ ಪ್ರಾಧಿಕಾರದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಒಸಾಮಾ ರಬೀ ತಿಳಿಸಿದ್ದಾರೆ.
ಹಡಗಿನ 25 ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಎವರ್ ಗ್ರೀನ್ ಹಡಗನ್ನು ನಿರ್ವಹಿಸುವ ಕಂಪನಿಯಾದ ಬರ್ನ್‌ಹಾರ್ಡ್ ಷುಲ್ಟೆ ಶಿಪ್ ಮ್ಯಾನೇಜ್‌ಮೆಂಟ್ ಹೇಳಿದೆ. ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿ ಭಾರತದಿಂದ ಬಂದವರು ಎಂದು ಹಡಗು ಕಂಪನಿಯ ಶೋಯಿ ಕಿಸೆನ್ ಕೈಶಾ ಮಾಹಿತಿ ನೀಡಿದ್ದಾರೆ.