ಕಾಬೂಲ್: ತಾಲಿಬಾನ್ ಉಗ್ರರು ಇಡೀ ದೇಶವನ್ನು ಆಕ್ರಮಿಸಿಕೊಂಡ ಯುದ್ಧೋನ್ಮಾದದಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಆದರೆ ಇಪ್ಪತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲ ಅಫ್ಘಾನ್‌ನ ಒಂದು ಪ್ರಾಂತ್ಯ ಪ್ರವೇಶಿಸಲು ಅವರು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.
ತಾಲಿಬಾನ್ ಆಕ್ರಮಣಕಾರರ ಮೇಲೆ ಸಿಂಹಘರ್ಜನೆ ಮಾಡುತ್ತಿರುವ ಆ ಪ್ರದೇಶವೇ ಪಂಜಶೀರ್. ಒಮ್ಮೆ ಗೆರಿಲ್ಲಾ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಹ್ಮದ್ ಶಾ ಮಸೂದ್ ಈ ಪ್ರಾಂತ್ಯದ ಅತ್ಯಂತ ಪ್ರಬಲ ನಾಯಕ.
ಪಂಜಶೀರ್ ಎಲ್ಲಿದೆ?
ಪಂಜಶೀರ್ ಪ್ರಾಂತ್ಯವು ಕಾಬೂಲ್‌ನಿಂದ ಉತ್ತರಕ್ಕೆ 150 ಕಿ.ಮೀ ದೂರದಲ್ಲಿದೆ. ಹಿಂದುಕುಶ್ ಪರ್ವತ ಶ್ರೇಣಿಯ ಬಳಿ ಇರುವ ಈ ಪ್ರದೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ತಜಿಕ್ ಜನಾಂಗಕ್ಕೆ ಸೇರಿದ ಜನರಿದ್ದಾರೆ. ಪಂಜಶಿರ್ ಎಂದರೆ ಸಂಸ್ಕೃತದಲ್ಲಿ ಐದು ಸಿಂಹಗಳು ಎಂದರ್ಥ. ಈ ಸ್ಥಳಕ್ಕೆ ಈ ಹೆಸರೇಕೆ ಬಂತು ಎಂದು ತಿಳಿಯಲು 11ನೇ ಶತಮಾನದ ಇತಿಹಾಸಕ್ಕೆ ಹೋಗಬೇಕು. ಆ ಸಮಯದಲ್ಲಿ, ಐವರು ಸಹೋದರರು ಪ್ರವಾಹವನ್ನು ತಡೆಯಲು ಪ್ರಯತ್ನಿಸುತ್ತಿದ್ದರಂತೆ. ಇದನ್ನು ಹೊರತುಪಡಿಸಿ, ಅಲ್ಲಿನ ಜನರ ಹೋರಾಟದ ಪರಾಕ್ರಮಕ್ಕೆ ಸಂಬಂಧಿಸಿದಂತೆ ಅನೇಕ ಕಥೆಗಳು ಅಲ್ಲಿ ಪ್ರಚಲಿತದಲ್ಲಿವೆ.
ಇದು ಪಂಜಶೀರ್ ಪ್ರಾಂತ್ಯ: ಸಿಂಹದಂತೆ ಘರ್ಜಿಸು!
ಪಂಜಶೀರ್ ಶತಮಾನಗಳಿಂದ ಅತ್ಯಂತ ಪ್ರತಿರೋಧದ ಪ್ರದೇಶವಾಗಿದೆ. ವಿದೇಶಿ ಪಡೆಗಳು ಅಥವಾ ತಾಲಿಬಾನಿಗಳು ಇಲ್ಲಿ ವಿಜಯಪತಾಕೆ ಹಾರಿಸಲು ಸಾಧ್ಯವಾಗಿಲ್ಲ. ಈ ಹಿಂದೆ ತಾಲಿಬಾನ್ ಆಡಳಿತವನ್ನು ಕೊನೆಗೊಳಿಸುವಲ್ಲಿ ಈ ಪ್ರದೇಶವು ಪ್ರಮುಖ ಪಾತ್ರವಹಿಸಿದೆ. ಅಹ್ಮದ್ ಶಾ ಮಸೂದ್, ಇಲ್ಲಿನ ಹೆಸರಾಂತ ತಾಲಿಬಾನ್ ವಿರೋಧಿ ನಾಯಕ. ಈತ ಇಲ್ಲಿನ ಜನರಲ್ಲಿ ಚಳುವಳಿಯ ಉತ್ಸಾಹದ ಕಿಚ್ಚು ಹೊತ್ತಿಸಿ ಅವರಿಗೆ ಮಾರ್ಗದರ್ಶನ ಮಾಡಿದವರಲ್ಲಿ ಪ್ರಮುಖ. ಈತ ತಾಲಿಬಾನ್‌ನ ಅಂತ್ಯಕ್ಕಾಗಿ ಅವಿರತವಾಗಿ ಶ್ರಮಿಸಿದ್ದಾನೆ. 1970 ಮತ್ತು 1990ರ ದಶಕದಲ್ಲಿ ಸೋವಿಯತ್ ರಷ್ಯಾ ಆಕ್ರಮಣವನ್ನು ಉರುಳಿಸಲು ಮತ್ತು 1996-2001ರಲ್ಲಿ ತಾಲಿಬಾನಿಗಳ ರಾಕ್ಷಸ ಆಡಳಿತದ ವಿರುದ್ಧ ಅವಿರತ ಹೋರಾಟದಲ್ಲಿ ಈತ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸಿದ್ದ.
ತಾಲಿಬಾನ್ ತಿರಸ್ಕರಿಸಿ ಜನರ ಮನಸ್ಸಿನಲ್ಲಿ ಸಿಂಹದಂತೆ ನೆಲೆನಿಂತ ಅಹ್ಮದ್ ಶಾ
ಅಹ್ಮದ್ ಶಾ ಮಸೂದ್. ಕೇವಲ ರಾಜಕೀಯ ನಾಯಕನಲ್ಲ. ಈತ ಶಕ್ತಿಶಾಲಿ ಮಿಲಿಟರಿ ಕಮಾಂಡರ್ ಕೂಡಾ. ಸೋವಿಯತ್ ಒಕ್ಕೂಟ 1979-1989ರಲ್ಲಿ ನಡೆಸಿದ ಆಕ್ರಮಣವನ್ನು ಗೆರಿಲ್ಲಾ ತಂತ್ರಗಾರಿಕೆಯ ಮೂಲಕ ಪ್ರಬಲವಾಗಿ ವಿರೋಧಿಸಿದ್ದ ವ್ಯಕ್ತಿ. 1990ರಲ್ಲಿ ತನ್ನ ಪ್ರತಿಸ್ಪರ್ಧಿಗಳ ವಿರುದ್ಧ ಸರ್ಕಾರಿ ಮಿಲಿಟರಿ ಘಟಕ ಮುನ್ನಡೆಸಿದ್ದಾನೆ. ನಂತರ ಅಫ್ಘನ್ನರು ತಾಲಿಬಾನ್ ಅನ್ನು ಸ್ವಾಧೀನಪಡಿಸಿಕೊಂಡಾಗ ಅವರ ದುಷ್ಟ ಆಡಳಿತದ ವಿರುದ್ಧ ಕೊನೆಯ ಉಸಿರಿನವರೆಗೂ ಹೋರಾಡಿದ್ದಾನೆ.
ಇದನ್ನೂ ಓದಿ: ಆಫ್ಘನ್ನಲ್ಲಿ ತಾಲಿಬಾನ್ ಜಯ: ಭಯೋತ್ಪಾದಕ ಸಂಘಟನೆಗಳಿಗೆ ಮತ್ತಷ್ಟು ಬಲ
2001ರ ಸೆಪ್ಟೆಂಬರ್ 9 ರಂದು ತಾಲಿಬಾನ್ ಹಾಗೂ ಅಲ್‌ಖೈದಾ ಸಂಘಟನೆ ಒಟ್ಟಾಗಿ ನಕಲಿ ಪತ್ರಕರ್ತರ ಸೋಗಿನಲ್ಲಿ ಬಂದು ಸಂದರ್ಶನದ ನಾಟಕವಾಡಿ ಸ್ಫೋಟಿಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಅಹ್ಮದ್ ಶಾನನ್ನು ಕೊಲ್ಲಲಾಯಿತು. ಇದಾದ ಎರಡನೇ ದಿನಕ್ಕೆ ಅಲ್ ಖೈದಾ ಅಮೆರಿಕದ ಮೇಲೆ ನಡೆಸಿದ ದಾಳಿ ವಿಶ್ವವನ್ನು ಆತಂಕಕ್ಕೀಡು ಮಾಡಿತ್ತು. ಇದು ಅಂತಿಮವಾಗಿ ನ್ಯಾಟೋ ಪಡೆಗಳಿಂದ ಅಫ್ಘಾನಿಸ್ತಾನದ ಆಕ್ರಮಣಕ್ಕೆ ಕಾರಣವಾಯಿತು.
2001ರ ಡಿಸೆಂಬರ್ ವೇಳೆಗೆ ತಾಲಿಬಾನ್ ಆಡಳಿತವನ್ನು ಉರುಳಿಸಿ ವಿಜಯ ಸಾಧಿಸಲಾಯಿತು. ಅದರ ನಂತರ ಅಧಿಕಾರಕ್ಕೆ ಬಂದ ಹಮೀದ್ ಕರ್ಜಾಯಿ, ಅಹ್ಮದ್ ಶಾ ಮಸೂದ್ ಅವರನ್ನು ರಾಷ್ಟ್ರೀಯ ವೀರ ಎಂದು ಘೋಷಿಸಿದರು.
ಇದೀಗ ತಾಲಿಬಾನಿಗಳಿಗೆ ಮತ್ತೆ ಸವಾಲು
ಪ್ರಸ್ತುತ, ಪಂಜಶೀರ್ ಪ್ರದೇಶವು ರಾಜಕೀಯ ತಂತ್ರಗಳಿಗೆ ಕೇಂದ್ರಬಿಂದುವಾಗಿದೆ. ಅಫ್ಘಾನಿಸ್ತಾನ ರಾಷ್ಟ್ರೀಯ ಪ್ರತಿರೋಧದ ವೇದಿಕೆಯಾಗಿ ನಿಂತಿದೆ. ಈ ಪ್ರದೇಶದ ಅಹ್ಮದ್ ಶಾ ಮಸೂದ್ ಅವರ ಪುತ್ರ ಅಹ್ಮದ್ ಮಸೂದ್ ಮತ್ತು ಇದುವರೆಗೂ ಅಫ್ಘಾನ್ ಉಪಾಧ್ಯಕ್ಷರಾಗಿದ್ದ ಅಮರುಲ್ಲಾ ಸಲೇಹ್ ಮತ್ತು ಬಿಸ್ಮಿಲ್ಲಾ ಖಾನ್ ಮೊಹಮ್ಮದ್ ಅವರಂತಹ ಪ್ರಮುಖ ನಾಯಕರು ತಾಲಿಬಾನ್ ಆಕ್ರಮಣಕ್ಕೆ ಸವಾಲು ಹಾಕುತ್ತಿದ್ದಾರೆ.