ಕೊಲಂಬೊ: ದಶಕಗಳ ಹಿಂದೆ ನಡೆದ ಎಲ್‌ಟಿಟಿಇ ವಿರುದ್ಧದ ಯುದ್ಧದ ಅಂತಿಮ ಘಟ್ಟದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬ ಕಾರಣಕ್ಕೆ ದ್ವೀಪ ರಾಷ್ಟ್ರದ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಶವೇಂದ್ರ ಸಿಲ್ವಾ ಮತ್ತು ಅವರ ಕುಟುಂಬಕ್ಕೆ ಅಮೆರಿಕ ತನ್ನ ದೇಶಕ್ಕೆ ಪ್ರಯಾಣ ನಿರ್ಬಂಧ ವಿಧಿಸಿದೆ. ಅಮೆರಿಕದ ನಡೆಗೆ ಇದೀಗ ಶ್ರೀಲಂಕಾ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಸ್ವತಂತ್ರವಾಗಿ ಪರಿಶೀಲಿಸದ ಮಾಹಿತಿಯ ಆಧಾರದ ಮೇಲೆ ಲೆ.ಜ. ಸಿಲ್ವಾ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಪ್ರಯಾಣ ನಿರ್ಬಂಧ ಹೇರಿರುವುದಕ್ಕೆ ನಾವು ಆಕ್ಷೇಪ ವ್ಯಕ್ತಪಡಿಸುತ್ತೇವೆ ಎಂದು ಲಂಕಾ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಸಿಲ್ವಾ ಅವರ ಸೇವಾ ಹಿರಿತನವನ್ನು ಗಣನೆಗೆ ತೆಗೆದುಕೊಂಡು ಅವರನ್ನು ಸೇನೆಯ ಕಮಾಂಡರ್ ಆಗಿ ನೇಮಕ ಮಾಡಲಾಗಿದೆ. ಅವರ ವಿರುದ್ಧದ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪ ಸಾಬೀತಾಗಿಲ್ಲ ಎಂದು ಲಂಕಾ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ. ಹಾಗಾಗಿ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡಬೇಕೆಂದು ಲಂಕಾ ,ಅಮೆರಿಕಕ್ಕೆ ಮನವಿ ಮಾಡಿದೆ.