ಢಾಕಾ: ಪಶ್ಚಿಮ ಬಂಗಾಳದ ಬಳಿಕ ಬಾಂಗ್ಲಾದೇಶವನ್ನು ಕೇಂದ್ರೀಕರಿಸಿರುವ ಅಂಫಾನ್ ಚಂಡಮಾರುತ, ದೇಶದಲ್ಲಿ ಆರು ವರ್ಷದ ಬಾಲಕ ಸೇರಿದಂತೆ ಒಟ್ಟು 12 ಮಂದಿಯನ್ನು ಬಲಿ ಪಡೆದುಕೊಂಡಿದೆ.
2007 ರಲ್ಲಿ 3,500 ಜನರನ್ನು ಬಲಿಪಡೆದುಕೊಂಡ 'ಸಿಡ್ರ್' ಚಂಡಮಾರುತದ ಬಳಿಕ ಬಾಂಗ್ಲಾದೇಶಕ್ಕೆ ಅಪ್ಪಳಿಸಿರುವ ಭೀಕರ ಚಂಡಮಾರುತ ಇದಾಗಿದೆ. ಸೈಕ್ಲೋನ್ ಅಬ್ಬರಕ್ಕೆ ಬಾಂಗ್ಲಾದ ಕರಾವಳಿ ಜಿಲ್ಲೆಗಳಲ್ಲಿನ ಅನೇಕ ತಗ್ಗು ಪ್ರದೇಶಗಳು ಮುಳುಗಡೆಯಾಗಿದ್ದು, ಮರಗಳು ಧರೆಗುರುಳಿವೆ. ಅಲ್ಲದೇ ಸಾವಿರಾರು ಮನೆಗಳಿಗೆ ಹಾನಿಯಾಗಿದೆ.
ಬಾರ್ಗುನಾ, ಸತ್ಖಿರಾ, ಫಿರೋಜ್‌ಪುರ, ಭೋಲಾ ಮತ್ತು ಪಟುಖಾಲಿ ಜಿಲ್ಲೆಗಳಲ್ಲಿ ಒಟ್ಟು 12 ಜನರು ಮೃತಪಟ್ಟಿದ್ದಾರೆ. ಬಾರ್ಗುನಾದಲ್ಲಿ ನೀರಿನಲ್ಲಿ ಮುಳುಗಿ 60 ವರ್ಷದ ವೃದ್ಧ, ಸತ್ಖಿರಾದಲ್ಲಿ ಮರದ ರೆಂಬೆ ಮುರಿದು ಬಿದ್ದು 40 ವರ್ಷದ ಮಹಿಳೆ, ಪಿರೋಜ್‌ಪುರದಲ್ಲಿ ಗೋಡೆ ಕುಸಿದು 60 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ. ಭೋಲಾ ಜಿಲ್ಲೆಯಲ್ಲಿ ಬಿರುಗಾಳಿಯಲ್ಲಿ ಸಿಲುಕಿ ಇಬ್ಬರು, ಪಟುಖಾಲಿಯಲ್ಲಿ ಮರದ ರೆಂಬೆ ಹೊಡೆದು ಆರು ವರ್ಷದ ಬಾಲಕ ಮೃತಪಟ್ಟಿದ್ದಾನೆ.
ಬುಧವಾರ ಮಧ್ಯಾಹ್ನ ಎರಡು ಗಂಟೆ ವೇಳೆಗೆ ಪಶ್ಚಿಮ ಬಂಗಾಳದ ದಿಘಾ ಹಾಗೂ ಬಾಂಗ್ಲಾದ ಹತಿಯ ದ್ವೀಪಗಳಿಗೆ ಅಪ್ಪಳಿಸಿತ್ತು. ನಿನ್ನೆ ಸಂಜೆ 5 ಗಂಟೆ ವೇಳಗೆ 80 ಕಿ.ಮೀ ವ್ಯಾಪ್ತಿಯಲ್ಲಿ ಗಂಟೆಗೆ ಸುಮಾರು 160 ರಿಂದ 180 ಕಿ.ಮೀ ವೇಗದಲ್ಲಿ ಬಾಂಗ್ಲಾದೇಶ ಕರಾವಳಿಯನ್ನು ದಾಟಲು ಪ್ರಾರಂಭಿಸಿತ್ತು. ಈಗಾಗಲೇ ದೇಶದಲ್ಲಿ 20 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ.