ಆನ್‌ಲೈನ್ ಶಾಪಿಂಗ್‌ಗೆ ಸಂಬಂಧಿಸಿದ ಅನೇಕ ಚಾನಲ್‌ಗಳು, ಆ್ಯಪ್‌ಗಳು, ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಸೈಟ್ಗಳನ್ನು ನೋಡುತ್ತಲೇ ಇರುತ್ತೇವೆ. ಅವುಗಳಲ್ಲಿ ಮಾರಾಟಗಾರನೊಬ್ಬ ವಸ್ತುಗಳ ಬಗ್ಗೆ ವಿವರಿಸುವ ಮೂಲಕ ಮಾರಾಟಕ್ಕೆ ಪ್ರಯತ್ನಿಸುತ್ತಾರೆ. ಈಗ ಇಲ್ಲೋರ್ವ ಸೇಲ್ಸ್ಮ್ಯಾನ್(Salesman) ಹೊಸದೊಂದು ದಾಖಲೆ ಮೂಲಕ ಸುದ್ದಿಯಾಗಿದ್ದಾರೆ.
ಹೌದು. ಚೀನಾದಲ್ಲಿ 'ಟೊವೊಬವೊ' ಎಂಬ ಚೀನಿ ಶಾಪಿಂಗ್ ಆ್ಯಪ್ ಇದೆ. ಆಲಿಬಾಬಾ ಗುಂಪಿಗೆ ಸೇರಿದ ಈ ಆ್ಯಪ್ ಮೂಲಕ ಸೌಂದರ್ಯ ವರ್ಧಕ ವಸ್ತುಗಳನ್ನು ಲೀ ಜಿಯಾಕಿ ಮಾರಾಟ ಮಾಡುತ್ತಾರೆ. ಮಹಿಳೆಯರು ಬಳಸುವ ಲಿಪ್‌ಸ್ಟಿಕ್‌ಗಳನ್ನು ಮಾರಾಟ ಮಾಡುವುದರಲ್ಲಿ ಲೀ ದಿಟ್ಟ. ಹಾಗಾಗಿಯೇ ಅವರು ‘ಕಿಂಗ್ ಆಫ್ ಲಿಪ್ಸ್ಟಿಕ್’ ಹಾಗೂ ‘ಲಿಪ್ಸ್ಟಿಕ್ ಬ್ರದರ್’ ಎಂದು ದೇಶಾದ್ಯಂತ ಜನಪ್ರಿಯತೆ ಗಳಿಸಿದ್ದಾರೆ. ಇತ್ತೀಚೆಗೆ ಲೀ ಒಂದೇ ದಿನದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಅಲಿಬಾಬಾ ಸಂಸ್ಥೆ ಪ್ರತಿ ವರ್ಷ ಶಾಪಿಂಗ್ ಉತ್ಸವವನ್ನು ಆಯೋಜಿಸಿ ದೊಡ್ಡ-ದೊಡ್ಡ ಕೊಡುಗೆಗಳನ್ನು ಪ್ರಕಟಿಸುತ್ತದೆ. ಈ ಹಿನ್ನೆಲೆ ನೇರ ಪ್ರಸಾರದ ಮೂಲಕ ಒಂದೇ ದಿನದಲ್ಲಿ ಲೀ 14.23 ಸಾವಿರ ಕೋಟಿ ಮೌಲ್ಯದ ವಸ್ತುಗಳು ಮತ್ತು ಲೋಷನ್ಸ್‌ಗಳು ಮಾರಾಟ ಮಾಡಿದ್ದಾರೆ. ಈ ಮೂಲಕ ಚೀನಾದಲ್ಲಿ ಅವರ ಹೆಸರು ಮತ್ತೊಮ್ಮೆ ಸದ್ದು ಮಾಡಿದೆ.
ಹಿಂದೆ ಐದು ನಿಮಿಷಗಳಲ್ಲಿ 15,000 ಲಿಪ್‌ಸ್ಟಿಕ್‌ಗಳನ್ನು ಮಾರಾಟ ಮಾಡಿ ಸೈ ಎನಿಸಿಕೊಂಡಿದ್ದರು ಲೀ. 2019 ರಲ್ಲಿ, ಅವರು ಮಾಡೆಲ್‌ಗಳಿಗಾಗಿ 30 ಸೆಕೆಂಡುಗಳಲ್ಲಿ ಹೆಚ್ಚು ಲಿಪ್‌ಸ್ಟಿಕ್‌ಗಳನ್ನು ಮಾರಿ ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾರೆ. ಪ್ರತಿಯೊಬ್ಬರೂ ಅವರ ಮಾರಾಟ ಕೌಶಲ್ಯಕ್ಕೆ ಫಿದಾ ಆಗಿದ್ದಾರೆ. ಡೋವಿನ್ (ಚೈನೀಸ್ ಟಿಕ್ ಟಾಕ್) ನಲ್ಲಿ ಲೀ 4 ಕೋಟಿ ಅನುಯಾಯಿಗಳನ್ನು ಹೊಂದಿದ್ದಾರೆ. ಅವರು ಮಾರಾಟದ ವಸ್ತುಗಳನ್ನು ಪ್ರಾಮಾಣಿಕವಾಗಿ ವಿವರಿಸುತ್ತಾರೆ. ವಸ್ತುಗಳಲ್ಲಿ ದೋಷವಿದ್ದರೆ ಅದನ್ನು ಖರೀದಿಸಬೇಡಿ ಎಂದು ತಿಳಿಸುತ್ತಾರೆ. ಈ ಮೂಲಕ ಲೀ ಖರೀದಿದಾರರ ವಿಶ್ವಾಸ ಮತ್ತು ಮನಸ್ಸನ್ನು ಗೆದ್ದಿದ್ದಾರೆ.