ಬೀಜಿಂಗ್: ಚೀನಾದ ಹೆನಾನ್ನಲ್ಲಿ ವರುಣನಾರ್ಭಟ ಜೋರಾಗಿದ್ದು, ಜನ -ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ವಿಪರ್ಯಾಸ ಎಂದರೆ ಇಷ್ಟೊಂದು ಪ್ರಮಾಣದ ಮಳೆಯಾಗಿರುವುದು ಸಾವಿರ ವರ್ಷದಲ್ಲಿ ಇದೇ ಮೊದಲ ಬಾರಿ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಸಾವಿನ ಸಂಖ್ಯೆ ಏರುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಕಂಡು ಕೇಳರಿಯದ ಸುರಿದ ಮಳೆಗೆ ನಿನ್ನೆ 12 ಜನರು ಸಾವನ್ನಪ್ಪಿದ್ದಾರೆಂದು ವರದಿಯಾಗಿತ್ತು. ಸುಮಾರು 10,00,00 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು.ಇದೀಗ ಮೃತರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಏಳು ಮಂದಿ ಕಾಣೆಯಾಗಿದ್ದಾರೆಂದು ವರದಿಯಾಗಿದೆ.
ಕ್ಸಿನ್‌ಸಿಯಾಂಗ್ ನಗರವು ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾಗಿದ್ದು, 2,600ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ವರ್ಗಾಯಿಸಲಾಗಿದೆ. ಹೆನಾನ್ ಪ್ರಾಂತ್ಯದಲ್ಲಿ 160,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಕೆಲವು ಭಾಗಗಳು ದಾಖಲೆಯ ಮಳೆಯಿಂದ ಮುಳುಗಿ ಮಾರಣಾಂತಿಕ ಪ್ರವಾಹಕ್ಕೆ ಕಾರಣವಾದ ನಂತರ ಚೀನಾದ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯ ರಕ್ಷಣಾ ತಂಡಗಳನ್ನು ಪ್ರವಾಹದ ಪ್ರದೇಶಕ್ಕೆ ರವಾನಿಸಿದ್ದಾರೆ.
ಇದನ್ನೂ ಓದಿ: ವರುಣಾರ್ಭಟಕ್ಕೆ 12 ಬಲಿ...1ಲಕ್ಷ ಜನರ ಸ್ಥಳಾಂತರ... ಸಾವಿರ ವರ್ಷದಲ್ಲೇ ಇಷ್ಟೊಂದು ಮಳೆ!
ಚೀನಾದ ತುರ್ತು ಪರಿಸ್ಥಿತಿ ನಿರ್ವಹಣಾ ಸಚಿವಾಲಯವು ಮಂಗಳವಾರದಂದು ಪ್ರವಾಹ ಪೀಡಿತ ಹೆನಾನ್ ಪ್ರಾಂತ್ಯಕ್ಕೆ ಸಹಾಯ ಮಾಡಲು ಇತರ ಏಳು ಪ್ರಾಂತ್ಯಗಳಿಂದ ವೃತ್ತಿಪರ ರಕ್ಷಕರನ್ನು ಒಳಗೊಂಡ 1,800 ಸದಸ್ಯರ ರಕ್ಷಣಾ ತಂಡವನ್ನು ಕಳುಹಿಸಿದೆ.
ಸೆಂಟ್ರಲ್ ಥಿಯೇಟರ್ ಕಮಾಂಡ್ ಆಫ್ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಪ್ರವಾಹದಿಂದ ಹಾನಿಗೊಳಗಾದ 30ಕ್ಕೂ ಹೆಚ್ಚು ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು 5,700 ಕ್ಕೂ ಹೆಚ್ಚು ಸೈನಿಕರು, ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಮಿಲಿಷಿಯಾಗಳನ್ನು ಹಾಗೂ 148 ವಾಟರ್‌ಕ್ರಾಫ್ಟ್ ಮತ್ತು ವಾಹನಗಳನ್ನು ರವಾನಿಸಿದೆ.
ಪ್ರಸ್ತುತ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದೆ. ಹೆನಾನ್‌ನಲ್ಲಿನ ಇತರ ಪಡೆಗಳೂ ಸಹ ಪ್ರವಾಹದ ವಿರುದ್ಧದ ಕಾರ್ಯಾಚರಣೆಗಳಲ್ಲಿ ಭಾಗವಹಿಸಲು ಸಿದ್ಧವಾಗಿದೆ ಎಂದು ಸೆಂಟ್ರಲ್ ಥಿಯೇಟರ್ ಕಮಾಂಡ್ ಅಧಿಕಾರಿ ಝಾಂಗ್ ಝೋಂಗುವಾ ತಿಳಿಸಿದ್ದಾರೆ.