ಮಾಸ್ಕೋ: ಅಫ್ಘಾನಿಸ್ತಾನದ ವಿಚಾರದಲ್ಲಿ ಅಮೆರಿಕದ ಸಾಧನೆ ಶೂನ್ಯ ಎಂದು ರಷ್ಯಾಧ್ಯಕ್ಷ ವ್ಲಾಡಿಮಿರ್ ಪುಟಿನ್ ಟೀಕಿಸಿದ್ದಾರೆ. ಅಮೆರಿಕ ಅಫ್ಘಾನ್‌ನಲ್ಲಿ 20 ವರ್ಷ ತನ್ನ ಯೋಧರನ್ನು ನಿಯೋಜಿಸಿತ್ತು. ಈ ಸುದೀರ್ಘ ಪಾಲ್ಗೊಳ್ಳುವಿಕೆಯಲ್ಲಿ ಆ ದೇಶದ ಸಾಧನೆ ಝೀರೋ ಎಂದಿದ್ದಾರೆ.
ಎರಡು ವರ್ಷಗಳ ಕಾಲ ಅಫ್ಘಾನಿಸ್ತಾನದಲ್ಲಿದ್ದು ಸಾಧಿಸಿದ್ದು ಸರಣಿ ದುರಂತಗಳು, ಸಂಪೂರ್ಣ ನಷ್ಟದ ಹೊರತಾಗಿ ಬೇರೇನೂ ಇಲ್ಲ. ಯುಎಸ್ ಅಲ್ಲಿನ ಜನರಿಗೆ ಶೂನ್ಯ ಫಲಿತಾಂಶ ನೀಡಿದೆ ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಹೊರಗಿನವರು ಸಾಧಿಸುವುದು ಅಸಾಧ್ಯವೆಂದು ಹೇಳಿರುವ ಪುಟಿನ್, ಯಾರಾದರೂ, ಯಾರಿಗಾದರೂ, ಏನನ್ನಾದರೂ ಮಾಡಿದರೆ ಅದನ್ನು ಜನರು ಸ್ಮರಿಸಬೇಕು, ಗೌರವಿಸುವಂತಿರಬೇಕು ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಅವರ ನಡೆ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
1989ರಲ್ಲಿ ಸೋವಿಯತ್ ಸೇನೆಯನ್ನು ಹಿಂತೆಗೆದುಕೊಂಡ ಬಳಿಕ ಅಫ್ಘಾನಿಸ್ತಾನದಲ್ಲಿ 10 ವರ್ಷಗಳ ಸುದೀರ್ಘ ಯುದ್ಧವನ್ನು ರಷ್ಯಾ ಕೊನೆಗೊಳಿಸಲಾಗಿತ್ತು. ಕಳೆದ ಕೆಲವು ವರ್ಷಗಳಲ್ಲಿ ಮಧ್ಯವರ್ತಿಯಾಗಿ ಸಂಘರ್ಷಪೀಡಿತ ದೇಶದಲ್ಲಿ ರಾಜತಾಂತ್ರಿಕ ಪುನರಾಗಮನ ಮಾಡಿತ್ತು. ಅಮೆರಿಕದ ನಡೆಯನ್ನು ಕಟುವಾಗಿ ಟೀಕಿಸಿರುವ ಪುಟಿನ್, ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ತಾಲಿಬಾನ್‌ಗಳ ಪರ ಮೃದುಧೋರಣೆ ತಾಳಿರುವುದನ್ನು ಮರೆಯುವಂತಿಲ್ಲ.
ಇದನ್ನೂ ಓದಿ: ಅಫ್ಘನ್ ಬಿಕ್ಕಟ್ಟು.. 45 ನಿಮಿಷಗಳ ಕಾಲ ರಷ್ಯಾ ಅಧ್ಯಕ್ಷರ ಜತೆ ಪ್ರಧಾನಿ ಮೋದಿ ಮಾತುಕತೆ