ಮುಜಫರಾಬಾದ್(ಪಾಕ್ ಆಕ್ರಮಿತ ಕಾಶ್ಮೀರ): ನೀಲಂ ಮತ್ತು ಜೀಲಂ ನದಿಗಳ ಬಳಿ ಅಣೆಕಟ್ಟು ನಿರ್ಮಾಣ ವಿರೋಧಿಸಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮುಜಫರಾಬಾದ್ ನಗರದಲ್ಲಿ ಬೃಹತ್ ಪ್ರತಿಭಟನೆ ಮತ್ತು ಪಂಜಿನ ರ‍್ಯಾಲಿ ನಡೆಯಿತು.
'ದರಿಯಾ ಬಚಾವೊ, ಮುಜಫರಾಬಾದ್ ಬಚಾವೊ ಸಮಿತಿಯ ಪ್ರತಿಭಟನಾಕಾರರು' ನೀಲಂ-ಜೀಲಂ ನದಿಗಳು ಹರಿಯಲಿ, ನಾವು ಬದುಕೋಣ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ರ‍್ಯಾಲಿಯಲ್ಲಿ ನಗರ ಮತ್ತು ಪಿಒಕೆ ಇತರ ಭಾಗಗಳಿಂದ ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
ಜೀಲಂ ನದಿಗೆ ನಿರ್ಮಿಸಲಿರುವ ಕೊಹಾಲ ಜಲ ವಿದ್ಯುತ್ ಯೋಜನೆಯು ಪಿಒಕೆ ಸುಧನೋತಿ ಜಿಲ್ಲೆಯ ಆಜಾದ್ ಪಟ್ಟಣ ಸೇತುವೆಯಿಂದ ಸುಮಾರು 7 ಕಿ.ಮೀ. ದೂರದಲ್ಲಿದೆ ಮತ್ತು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಿಂದ 90 ಕಿ.ಮೀ. ದೂರದಲ್ಲಿದೆ. ಈ ಕಾಮಗಾರಿ 2026ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಬೃಹತ್ ಪ್ರಮಾಣದ ಅಣೆಕಟ್ಟು ನಿರ್ಮಾಣದಿಂದ ನದಿ ತಿರುವುಗಳು ಅವುಗಳ ಅಸ್ತಿತ್ವಕ್ಕೆ ಧಕ್ಕೆ ತರಲಿದೆ. ಪರಿಸರದ ಮೇಲೆ ಅಪಾರ ಪ್ರಮಾಣದಲ್ಲಿ ಪರಿಣಾಮ ಬೀರಲಿದೆ ಎಂದು ಪ್ರತಿಭಟನಾಕಾರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಆಜಾದ್ ಪಟ್ಟಣ ಮತ್ತು ಕೊಹಾಲ ಜಲ ವಿದ್ಯುತ್ ಯೋಜನೆಗಳನ್ನು ನಿರ್ಮಿಸಲು ಪಾಕಿಸ್ತಾನ ಮತ್ತು ಚೀನಾ ಒಪ್ಪಂದಗಳಿಗೆ ಸಹಿ ಹಾಕಿದ್ದವು. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಭಾಗವಾಗಿ 700.7 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಆಜಾದ್ ಪಟ್ಟಣ ವಿದ್ಯುತ್ ಯೋಜನೆಗೆ ಜುಲೈ 6, 2020 ರಂದು ಸಹಿ ಹಾಕಲಾಯಿತು. 1.54 ಬಿಲಿಯನ್ ಡಾಲರ್ ಯೋಜನೆಯನ್ನು ಚೀನಾ ಮೂಲದ ಕಂಪನಿ ಪ್ರಾಯೋಜಿಸುತ್ತಿದೆ.