ಇಸ್ಲಾಮಾಬಾದ್ (ಪಾಕಿಸ್ತಾನ) : ಪಾಕ್ನಲ್ಲೂ ಕೊರೊನಾ ಕೇಕೆ ಹೆಚ್ಚಾಗುತ್ತಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 19,000 ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ 23 ರೋಗಿಗಳು ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 440 ಕ್ಕೆ ತಲುಪಿದೆ ಎಂದು ಪಾಕ್ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ದೇಶದಲ್ಲಿ ಈವರೆಗೆ 4,817 ಜನರು ಮಾರಣಾಂತಿಕ ವೈರಸ್‌ನಿಂದ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಒಟ್ಟು 19,103 ಕೊರೊನಾ ಪಾಸಿಟಿವ್ ಕೇಸ್ಗಳಿದ್ದು, ಪಂಜಾಬ್ ಪ್ರಾಂತ್ಯದಲ್ಲಿ 7,106, ಸಿಂಧ್ನಲ್ಲಿ 7,102, ಖೈಬರ್-ಪಖ್ತುನ್ಖ್ವಾದಲ್ಲಿ 2,907, ಬಲೂಚಿಸ್ತಾನ್ 1,172, ಇಸ್ಲಾಮಾಬಾದ್ 393, ಗಿಲ್ಗಿಟ್-ಬಾಲ್ಟಿಸ್ತಾನ್ 356 ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ 67 ಪ್ರಕರಣಗಳು ದಾಖಲಾಗಿವೆ ಎಂದು ಸಚಿವಾಲಯ ತಿಳಿಸಿದೆ.
ಆರೋಗ್ಯಾಧಿಕಾರಿಗಳು ಈವರೆಗೆ ಅಂದರೆ, ಕಳೆದ 24 ಗಂಟೆಗಳಲ್ಲಿ 8,716 ಮಂದಿ ಸೇರಿದಂತೆ 2,03,025 ಮಂದಿಗೆ ಪರೀಕ್ಷೆಗಳನ್ನು ನಡೆಸಿದ್ದಾರೆ. ಕೊವಿಡ್ 19 ವಿರುದ್ಧದ ಲಸಿಕೆ ಯಾವಾಗ ಲಭ್ಯವಾಗಲಿದೆ ಎಂದು ಖಚಿತವಾಗಿಲ್ಲ.
ನಾವು ಆರು ತಿಂಗಳು ಅಥವಾ ಒಂದು ವರ್ಷ ಕೊರೊನಾ ವೈರಸ್ನೊಂದಿಗೆ ಬದುಕಬೇಕಾಗಬಹುದು ಎಂಬ ಆತಂಕವನ್ನು ಪ್ರಧಾನಿ ಇಮ್ರಾನ್ ಖಾನ್ ವ್ಯಕ್ತಪಡಿಸಿದ್ದರು. ಸಾಂಕ್ರಾಮಿಕ ರೋಗದ ವಿರುದ್ಧದ ಯುದ್ಧವನ್ನು ಬುದ್ಧಿವಂತಿಕೆಯಿಂದ ಗೆಲ್ಲಬಹುದೇ ವಿನಃ ಜನಸಾಮಾನ್ಯರನ್ನು ಬಲವಂತವಾಗಿ ಕಟ್ಟಿಹಾಕಿ ಬಾಯಿ ಮುಚ್ಚಿಸುವುದರಿಂದಲ್ಲ ಎಂದು ಖಾನ್ ಹೇಳಿದರು.