ಕಾಬೂಲ್(ಅಘ್ಘಾನಿಸ್ತಾನ) : ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಪಾಕಿಸ್ತಾನಿಯರು ಮತ್ತು ವಿದೇಶಿಯರನ್ನು ಸ್ಥಳಾಂತರಿಸುವ ಸಲುವಾಗಿ ಪಾಕಿಸ್ತಾನದ ಸರ್ಕಾರಿ ವಿಮಾನಯಾನ ಸಂಸ್ಥೆ ವಿಶೇಷ ವಿಮಾನಗಳನ್ನು ಪುನಾರಂಭಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಫವಾದ್ ಚೌಧರಿ, ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ (ಪಿಐಎ) ತನ್ನ ಎರಡು ವಿಮಾನಗಳನ್ನು ಅಫ್ಘನ್ ರಾಜಧಾನಿಗೆ ಕಳಿಸಿದ್ದು, 350 ಪ್ರಯಾಣಿಕರನ್ನು ಸ್ಥಳಾಂತರಿಸಲು ಹೇಳಿದೆ ಎಂದಿದ್ದಾರೆ.
ಪಾಕಿಸ್ತಾನದ ಆಂತರಿಕ ಸಚಿವಾಲಯವು ಗಡಿ ದಾಟುವ ಮೂಲಕ ಅಫ್ಘಾನಿಸ್ತಾನದಿಂದ ಪಾಕಿಸ್ತಾನಿಯರು ಮತ್ತು ವಿದೇಶಿಯರನ್ನು ಸ್ಥಳಾಂತರಿಸಲು ಅನುಕೂಲ ಮಾಡಿ ಕೊಡುತ್ತಿದೆ ಎಂದು ಚೌಧರಿ ಹೇಳಿದ್ದಾರೆ.
ತಾಲಿಬಾನ್ ಉಗ್ರಪಡೆಯು, ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ ಪಾಕಿಸ್ತಾನ ಸರ್ಕಾರವು ತನ್ನ ನಾಗರಿಕರು ಮತ್ತು ವಿದೇಶಿಯರನ್ನು ವಾಯು ಮತ್ತು ಭೂ ಮಾರ್ಗಗಳ ಮೂಲಕ ಸ್ಥಳಾಂತರಿಸಲು ಪ್ರಯತ್ನಿಸುತ್ತಿದೆ.
ಈ ಉದ್ದೇಶಕ್ಕಾಗಿ, ಪಾಕಿಸ್ತಾನವು ಎಲ್ಲಾ ರಾಜತಾಂತ್ರಿಕರು, ವಿದೇಶಿಯರು ಮತ್ತು ಪತ್ರಕರ್ತರಿಗೆ ಕಾಬೂಲ್‌ನಿಂದ ಸುರಕ್ಷತೆಯ ದೃಷ್ಟಿಯಿಂದ ವೀಸಾಗಳನ್ನು ನೀಡುತ್ತಿದೆ.
ಜನರ ಸ್ಥಳಾಂತರಕ್ಕೆ ಜರ್ಮನ್ ನೆರವು
ಜರ್ಮನಿಯ ಸೇನೆಯು ಈವರೆಗೆ 11 ಸ್ಥಳಾಂತರಿಸುವ ವಿಮಾನಗಳನ್ನು ಕಾಬೂಲ್ಗೆ ಕಳುಹಿಸಿದೆ. 1,600 ಜನರನ್ನ ಸ್ಥಳಾಂತರ ಮಾಡಿದೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ಹೇಳಿಕೆ ನೀಡಿದೆ. ಜರ್ಮನ್ ಸರ್ಕಾರವು ಜರ್ಮನ್ ಮಿಲಿಟರಿ, ಸುದ್ದಿ ಸಂಸ್ಥೆಗಳಿಗಾಗಿ ಕೆಲಸ ಮಾಡಿದ ಎಲ್ಲಾ ನಾಗರಿಕರು ಮತ್ತು ಸ್ಥಳೀಯ ಅಫ್ಘನ್ ಸಿಬ್ಬಂದಿಯನ್ನು ಕರೆತರಲು ಸಹಾಯ ಮಾಡುವ ಪ್ರತಿಜ್ಞೆ ಮಾಡಿದೆ.
ಕಾಬೂಲ್‌ನಲ್ಲಿರುವ ಜರ್ಮನಿಯ ಕಮಾಂಡಿಂಗ್ ಆಫೀಸರ್ ಜನರಲ್ ಜೆನ್ಸ್ ಆರ್ಲ್ಟ್, ಕಾಬೂಲ್ ವಿಮಾನ ನಿಲ್ದಾಣದ ಹೊರಗಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಅಫ್ಘಾನಿಸ್ತಾನದಿಂದ ವಿಮಾನಗಳಲ್ಲಿ ತೆರಳಲು ಆಶಿಸುತ್ತಿರುವುದರಿಂದ ಸ್ಥಳಾಂತರಕ್ಕೆ ತೊಂದರೆಯಾಗಿದೆ ಎಂದು ಹೇಳಿದರು.
‘ತಾಲಿಬಾನ್ ಸೇರಿರುವ ನಾಗ್ಪುರದಿಂದ ಗಡಿಪಾರಾದ ವ್ಯಕ್ತಿ’
2021ರ ಜೂನ್ನಲ್ಲಿ ನಾಗ್ಪುರದಿಂದ ಗಡಿಪಾರಾಗಿದ್ದ ಅಫ್ಘನ್ ಮೂಲದ ನೂರ್ ಮೊಹಮ್ಮದ್ ತಾಲಿಬಾನ್ಗೆ ಸೇರಿಕೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಬೂಲ್ನಲ್ಲಿ ಸಿಲುಕಿರುವ 110 ಪ್ರಜೆಗಳ ಸ್ಥಳಾಂತರಕ್ಕೆ ಕ್ರಮ
ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಉತ್ತರಾಖಂಡದ 110 ಪ್ರಜೆಗಳನ್ನು ಸುರಕ್ಷಿತವಾಗಿ ಕರೆತರಲು ಸರ್ಕಾರ ಕ್ರಮಕೈಗೊಂಡಿದೆ. ಈ ನಿಟ್ಟಿನಲ್ಲಿ 110 ಜನರ ಹೆಸರನ್ನು ಲಿಸ್ಟ್ ಮಾಡಿ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕಳುಹಿಸಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.