ಇಸ್ಲಮಾಬಾದ್(ಪಾಕಿಸ್ತಾನ): ಜಮ್ಮು ಮತ್ತು ಕಾಶ್ಮೀರ ಭಾರತದೊಂದಿಗೆ ವಿಲೀನವಾಗಿ ಇಂದಿಗೆ 72 ವರ್ಷ ಕಳೆದಿದ್ದು, ಪಾಕ್ ಇದನ್ನ ಬ್ಲ್ಯಾಕ್ ಡೇ ಎಂದು ಕರೆದಿದೆ.
ಕಾಶ್ಮೀರದ ಮಹಾರಾಜ 1947 ಅಕ್ಟೋಬರ್ 27ರಂದು ಜಮ್ಮು ಮತ್ತು ಕಾಶ್ಮೀರವನ್ನ ಭಾರತದೊಂದಿಗೆ ವಿಲೀನಗೊಳಿಸಿದ್ದನು. ಇಂದಿನ ದಿನವನ್ನ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಮೆರವಣಿಗೆ ನಡೆಸಿ ಬ್ಲ್ಯಾಕ್ ಡೇ ಎಂದು ಆಚರಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ, ಕಾಶ್ಮೀರ ಕಪ್ಪು ದಿನದಂದು ನಾವು ಕಾಶ್ಮೀರಿಗಳ ಆದರ್ಶಪ್ರಾಯವಾದ ಮನೋಭಾವ ಮತ್ತು ಚೈತನ್ಯವನ್ನು ಸ್ಮರಿಸುವುದಲ್ಲದೆ, ಅವರ ಹೋರಾಟಕ್ಕೆ ರಾಜಕೀಯ, ನೈತಿಕ ಮತ್ತು ರಾಜತಾಂತ್ರಿಕ ಬೆಂಬಲವನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.
ಈ ವರ್ಷದ 'ಕಾಶ್ಮೀರ ಕಪ್ಪು ದಿನ' ಇತರ ವರ್ಷಗಳಿಗಿಂತ ಭಿನ್ನವಾಗಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಅಕ್ಟೋಬರ್ 27, 1947 ರಂದು ಭಾರತವು ಜಮ್ಮು ಮತ್ತು ಕಾಶ್ಮೀರವನ್ನು ಆಕ್ರಮಿಸಿಕೊಂಡಿದೆ. ಅಲ್ಲದೆ ಈ ವರ್ಷ ಅಗಸ್ಟ್ 5 ರಂದು ವಿಶೇಷ ಸ್ಥಾನಮಾನ ರದ್ಧುಪಡಿಸುವ ಮೂಲಕ ಒದು ಹೆಜ್ಜೆ ಮುಂದೆ ಹೋಗಿದೆ.
ತಕ್ಷಣವೇ ಕರ್ಫ್ಯೂ ಮತ್ತು ಸಂವಹನ ಕಡಿತವನ್ನು ತೆಗೆದುಹಾಕುವುದರ ಜೊತೆಗೆ, ಆಕ್ರಮಿತ ಭೂಪ್ರದೇಶದಲ್ಲಿ ಭಾರತದ ಕಾನೂನುಬಾಹಿರ ಮತ್ತು ಏಕಪಕ್ಷೀಯ ಕ್ರಮಗಳನ್ನು ರದ್ದುಗೊಳಿಸುವಂತೆ ಪಾಕಿಸ್ತಾನ ಒತ್ತಾಯಿಸುತ್ತದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.