ವಾಷಿಂಗ್ಟನ್: 1971ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ನರಮೇಧದಲ್ಲಿ ಪಾಕಿಸ್ತಾನ ಸೇನೆಯ ಪಾತ್ರವನ್ನು ಬಹಿರಂಗಪಡಿಸುವ ವೆಬ್‌ಸೈಟ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದಕ್ಕಾಗಿ ಪಾಕ್ ಬೆದರಿಕೆ ಹಾಕಿದೆ ಎಂದು ಅಮೆರಿಕದಲ್ಲಿರುವ ಪ್ರಮುಖ ಹಿಂದೂ ವಕೀಲರ ಸಂಘ ಆರೋಪಿಸಿದೆ.
ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ (ಪಿಟಿಎ) ವೆಬ್ ಅನಾಲಿಸಿಸ್ ವಿಭಾಗವು ಹಿಂದೂ ಅಮೆರಿಕನ್ ಫೌಂಡೇಶನ್ (ಹೆಚ್‌ಎಎಫ್)ಗೆ ಪತ್ರ ಬರೆದಿದ್ದು, 'ಬಂಗಾಳಿ ಹಿಂದೂ ಜನಾಂಗೀಯ ಹತ್ಯೆ' ವೆಬ್ ಪುಟವನ್ನು ಕಿತ್ತೊಗೆಯಬೇಕು ಎಂದು ಸೂಚಿಸಿದೆ. ಹಾಗೆಯೇ ಪಾಕಿಸ್ತಾನ ಸರ್ಕಾರವು ತನ್ನ ದೇಶದ ಜನರಿಗೆ ನಿಮ್ಮ ಈ ವೆಬ್‌ಸೈಟ್ ಲಭ್ಯತೆಯನ್ನು ನಿರ್ಬಂಧಿಸುತ್ತದೆ ಎಂದು ತಿಳಿಸಿದೆ.
"ನಿಮ್ಮ https://www.hinduamerican.org/1971-bangladesh-genocide ವೆಬ್‌ಸೈಟ್, ಪಾಕಿಸ್ತಾನದ ಸಶಸ್ತ್ರ ಪಡೆಗಳನ್ನು ಅಪಹಾಸ್ಯ ಮಾಡುವ ಉದ್ದೇಶದಿಂದ, ರಾಜ್ಯ ವಿರೋಧಿ ಭಾವನೆಗಳನ್ನು ಪ್ರಚೋದಿಸಲು, ನಮ್ಮ ಸೇನೆಯನ್ನು ಕೆಣಕಲು, ಪಾಕಿಸ್ತಾನದ ಸಮಗ್ರತೆ, ಸಾರ್ವಭೌಮತ್ವ ಮತ್ತು ಭದ್ರತೆಗೆ ಹೊಂದಿಕೊಂಡಿರುವ ಜನಸಾಮಾನ್ಯರಲ್ಲಿ ದ್ವೇಷ ಬಿತ್ತಲು ಹೀಗೆ ತಪ್ಪು ಮಾಹಿತಿ ಪಸರಿಸುತ್ತಿದೆ" ಎಂದು ಪಿಟಿಎ ಪತ್ರದಲ್ಲಿ ಆರೋಪಿಸಿದೆ.
1971ರಲ್ಲಿ ಸುಮಾರು 10 ತಿಂಗಳ ಕಾಲ ನಡೆದ ಹತ್ಯಾಕಾಂಡದಲ್ಲಿ 20 ರಿಂದ 30 ಲಕ್ಷ ಜನರು ಬಲಿಯಾಗಿದ್ದಾರೆ. 2 ರಿಂದ 4 ಲಕ್ಷ ಮಹಿಳೆಯರ ಮೇಲೆ ಅತ್ಯಾಚಾರ ಎಸಗಲಾಗಿದೆ. 10 ದಶಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರು ಹಿಂದೂಗಳು ಎಂದು ಹೆಚ್‌ಎಎಫ್ ತಿಳಿಸಿದ್ದು, ಈ ಕೃತ್ಯದ ಹಿಂದಿನ ಪಾಕ್ ಸೇನೆ ಪಾತ್ರವನ್ನು ಬಹಿರಂಗಪಡಿಸಿದೆ.
ತಮ್ಮ ವೆಬ್‌ಸೈಟ್ ಜನಾಂಗೀಯ ಹತ್ಯಾಕಾಂಡದ ಬಗೆಗಿನ ವಿವಿಧ ದೃಷ್ಟಿಕೋನಗಳನ್ನು ಸೆರೆಹಿಡಿಯುತ್ತದೆ ಎಂದು ತಿಳಿಸಿರುವ ಹೆಚ್‌ಎಎಫ್, ತನ್ನ ವೆಬ್‌ಸೈಟ್ ತೆಗೆದುಹಾಕುವುದನ್ನು ನಿರಾಕರಿಸಿದೆ. ಅಮೆರಿಕದ ಗೌರವಾನ್ವಿತ ಸಂಸ್ಥೆಯನ್ನು ಬೆದರಿಸುವ ಪಾಕಿಸ್ತಾನದ ದುರ್ಬಲ ಪ್ರಯತ್ನವು ಅದರ ಅಮೇರಿಕನ್ ವಿರೋಧಿ, ಹಿಂದೂ ವಿರೋಧಿ ಕೃತ್ಯಗಳಿಗೆ ತಾಜಾ ಉದಾಹರಣೆಯಾಗಿದೆ ಎಂದು ಹೇಳಿದೆ.
ಬಾಂಗ್ಲಾ ನರಮೇಧದ ಕರಾಳ ನೆನಪು
ಅಂದಿನ ಪಶ್ಚಿಮ ಪಾಕಿಸ್ತಾನ (ಇಂದಿನ ಪಾಕಿಸ್ತಾನ)ವು ಪೂರ್ವ ಪಾಕಿಸ್ತಾನ (ಇಂದಿನ ಬಾಂಗ್ಲಾದೇಶ)ವನ್ನು ತನ್ನ ಸಂಪೂರ್ಣ ನಿಯಂತ್ರಣದಲ್ಲಿಟ್ಟುಕೊಂಡಿರುತ್ತದೆ. 1970ರ ಸಾರ್ವತ್ರಿಕ ಚುನಾವಣೆಯಲ್ಲಿ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ (ಬಾಂಗ್ಲಾ ಪಿತಾಮಹ) ಅವರು ಬಹುಮತದಿಂದ ಗೆದ್ದಿದ್ದರೂ ಪಾಕಿಸ್ತಾನ ಸೇನೆ ಅಧಿಕಾರವನ್ನು ಹಸ್ತಾಂತರಿಸಲು ನಿರಾಕರಿಸಿತ್ತು. ಇದರ ವಿರುದ್ಧ ಬಾಂಗ್ಲಾದೇಶದಲ್ಲಿ ಉಲ್ಬಣಗೊಂಡ ಹೋರಾಟವನ್ನು ಹತ್ತಿಕ್ಕಲು ಪಾಕ್ ಸೇನೆಯು 1971ರ ಮಾರ್ಚ್ 25ರಂದು ಆಪರೇಷನ್ ಸರ್ಚ್‌ಲೈಟ್ ಹೆಸರಲ್ಲಿ ನರಮೇಧ ಆರಂಭಿಸುತ್ತದೆ. ಅಂದು ಒಂದೇ ದಿನ ಸುಮಾರು 7,000 ಜನರ ಹತ್ಯೆ ಮಾಡಲಾಗುತ್ತದೆ. ಹೆಚ್‌ಎಎಫ್ ತಿಳಿಸಿದಂತೆ ಈ ಹತ್ಯಾಕಾಂಡವು ಸುಮಾರು 9-10 ತಿಂಗಳ ಕಾಲ ನಡೆದಿದ್ದು, 20 ರಿಂದ 30 ಲಕ್ಷ ಜನರನ್ನು ಕೊಲ್ಲಲಾಗುತ್ತದೆ. ಲಕ್ಷಾಂತರ ಹೆಣ್ಣುಮಕ್ಕಳು-ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಾರೆ.
ದೌರ್ಜನ್ಯ ತಾಳಲಾರದೆ ಸಾವಿರಾರು ಜನರು ಬಾಂಗ್ಲಾ ಬಿಟ್ಟು ನೆರೆಯ ಭಾರತದಲ್ಲಿ ಆಶ್ರಯ ಪಡೆಯಲು ಬಂದರು. ಈ ವೇಳೆ ಬಾಂಗ್ಲಾದೇಶದ ಬೆಂಬಲಕ್ಕೆ ನಿಂತ ಅಂದಿನ ಭಾರತದ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರು ಭಾರತದ ಸೇನೆಯನ್ನು ಬಾಂಗ್ಲಾಗೆ ಕಳುಹಿಸಿಕೊಡುತ್ತಾರೆ. ಪಾಕ್ ವಿರುದ್ಧದ ಹೋರಾಟದಲ್ಲಿ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗುತ್ತದೆ.