ಇಸ್ಲಾಮಾಬಾದ್: ಗೂಢಚಾರಿಕೆ ಆರೋಪದಲ್ಲಿ ಮರಣದಂಡನೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ಅವರ ಶಿಕ್ಷೆಯ ತೀರ್ಪಿನ ಮರುಪರಿಶೀಲನೆ ನಡೆಸುವ ಸರ್ಕಾರಿ ಮಸೂದೆಗೆ ಪಾಕಿಸ್ತಾನ ಸಂಸದೀಯ ಸಮಿತಿ ಒಪ್ಪಿಗೆ ನೀಡಿದೆ.
ಅಂತರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ನಿರ್ದೇಶನಗಳ ಮೇರೆಗೆ ಕುಲಭೂಷಣ್ ಜಾಧವ್ ಅವರಿಗೆ ನೀಡಲಾಗಿರುವ ಶಿಕ್ಷೆಯ ತೀರ್ಪನ್ನು ಪುನಃ ಪರಿಶೀಲನೆ ನಡೆಸುವ ಮಸೂದೆಗೆ ಸಮ್ಮತಿ ಸೂಚಿಸಲಾಗಿದೆ. ಮಸೂದೆಯನ್ನು ಸಂಸತ್ತು ಅಂಗೀಕರಿಸದಿದ್ದಲ್ಲಿ, ಐಸಿಜೆ ತೀರ್ಪನ್ನು ಪಾಲಿಸದಿದ್ದಲ್ಲಿ ಪಾಕಿಸ್ತಾನವು ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ಪಾಕಿಸ್ತಾನ ಸಂಸತ್ನ ಕಾನೂನು ಮತ್ತು ನ್ಯಾಯ ಸ್ಥಾಯಿ ಸಮಿತಿ ತಿಳಿಸಿದೆ.
ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಜಾಧವ್ ಅವರಿಗೆ 2017ರ ಏಪ್ರಿಲ್‌ನಲ್ಲಿ ಗೂಢಚರ್ಯೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು.