ಲಾಹೋರ್ (ಪಾಕಿಸ್ತಾನ): ಇಲ್ಲಿನ ವಿರೋಧ ಪಕ್ಷಗಳ ಉನ್ನತ ನಾಯಕನನ್ನು ಪಾಕಿಸ್ತಾನದ ನ್ಯಾಯಾಲಯ ಮನಿ ಲಾಂಡರಿಂಗ್ ಮತ್ತು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಬಂಧಿಸಿದೆ.
ಪಾಕಿಸ್ತಾನ ಮುಸ್ಲಿಂ ಲೀಗ್ - ನವಾಜ್ (ಪಿಎಂಎಲ್-ಎನ್) ಅಧ್ಯಕ್ಷ ಮತ್ತು ವಿರೋಧ ಪಕ್ಷಗಳ ಮುಖಂಡ ಶಹಬಾಜ್ ಷರೀಫ್ ಅವರ ಜಾಮೀನು ಅರ್ಜಿ ಲಾಹೋರ್ ಹೈಕೋರ್ಟ್ನಲ್ಲಿ (ಎಲ್‌ಎಚ್‌ಸಿ) ತಿರಸ್ಕೃತವಾದ ಬಳಿಕ ನ್ಯಾಯಾಲಯದ ಕೊಠಡಿಯಿಂದ ಅವರನ್ನು ಬಂಧಿಸಲಾಯಿತು.
ಲಾಹೋರ್ ಹೈಕೋರ್ಟ್‌ನ ಇಬ್ಬರು ನ್ಯಾಯಾಧೀಶರ ಪೀಠವು ಶಹಬಾಜ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ರಾಷ್ಟ್ರೀಯ ಅಕೌಂಟೆಬಿಲಿಟಿ ಬ್ಯೂರೋ (ಎನ್‌ಎಬಿ) ಅವರನ್ನು ಬಂಧಿಸಿದೆ.
ಶಹಬಾಜ್ ಷರೀಫ್ ಅಧಿಕ ಆಸ್ತಿ ಮತ್ತು ಮನಿ ಲಾಂಡರಿಂಗ್ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಮತ್ತೊಂದೆಡೆ ಪಾಕ್ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಅವರ ಸಹೋದರಿ ಫರಿಯಾಲ್ ತಲ್ಪುರರನ್ನು ಮೆಗಾ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಹೊಣೆಗಾರಿಕೆ ಸಂಬಂಧ ನ್ಯಾಯಾಲಯ ದೋಷಾರೋಪಣೆ ಮಾಡಿದೆ.
ನಕಲಿ ಖಾತೆ ಪ್ರಕರಣಗಳಲ್ಲಿ ಜರ್ದಾರಿ ಅವರ ಮನವಿಯನ್ನು ವಜಾಗೊಳಿಸಿದ ಕೋರ್ಟ್, ಮೂರು ಭ್ರಷ್ಟಾಚಾರದ ಉಲ್ಲೇಖಗಳನ್ನು ನೀಡಿ ಅವರನ್ನು ಪ್ರಕರಣಗಳಲ್ಲಿ ಖುಲಾಸೆಗೊಳಿಸಲಾಗುವುದಿಲ್ಲ ಎಂದು ತಿಳಿಸಿದೆ.
ಈ ಪ್ರಕರಣದಲ್ಲಿ ಓಮ್ನಿ ಗ್ರೂಪ್‌ನ ಮುಖ್ಯಸ್ಥ ಅನ್ವರ್ ಮಜೀದ್ ಮತ್ತು ಅವರ ಪುತ್ರ ಅಬ್ದುಲ್ ಘಾನಿಯನ್ನು ಕೂಡ ನ್ಯಾಯಾಲಯ ದೋಷಾರೋಪಣೆ ಮಾಡಿದೆ.