ಕಾಬೂಲ್: ಅಫ್ಘಾನಿಸ್ತಾನದ ವಿವಿಧ ಪ್ರದೇಶಗಳಲ್ಲಿ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಗಳಲ್ಲಿ 100ಕ್ಕೂ ಹೆಚ್ಚು ತಾಲಿಬಾನ್ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ಅಫ್ಘನ್ ರಕ್ಷಣಾ ಸಚಿವಾಲಯ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಅಫ್ಘಾನಿಸ್ತಾನದ ಲಾಗ್ಮನ್, ಕುನಾರ್, ನಂಗರ್ಹಾರ್, ಘಜ್ನಿ, ಪಕ್ತಿಯಾ, ಮೈದಾನ್ ವಾರ್ಡಾಕ್, ಖೋಸ್ಟ್, ಜಾಬುಲ್, ಬದ್ಗಿಸ್, ಹೆರಾತ್, ಫರಿಯಾಬ್, ಹೆಲ್ಮಾಂಡ್ ಮತ್ತು ಬಾಗ್ಲಾನ್ ಪ್ರಾಂತ್ಯಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಇದನ್ನೂ ಓದಿ: ಇರಾನ್ನ ಅತೀದೊಡ್ಡ ಯುದ್ಧನೌಕೆ ಬೆಂಕಿಗಾಹುತಿ
ನೂರಕ್ಕೂ ಹೆಚ್ಚು ಉಗ್ರರನ್ನು ಸದೆಬಡಿಯಲಾಗಿದ್ದು, ಸುಮಾರು 50 ತಾಲಿಬಾನ್ ಉಗ್ರರು ಗಾಯಗೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಉಗ್ರರ ಅಪಾರ ಪ್ರಮಾಣದ ಶಸ್ತ್ರಾಸ್ತ್ರ-ಮದ್ದುಗುಂಡುಗಳನ್ನು ನಾಶಪಡಿಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ದೇಶಾದ್ಯಂತ ಹಲವಾರು ಸ್ಥಳಗಳಲ್ಲಿ ದಾಳಿ, ಹಿಂಸಾಚಾರಗಳು ಹೆಚ್ಚಾಗಿದ್ದು, ಅಧಿಕೃತವಾಗಿ ಇದರ ಹೊಣೆಯನ್ನು ತಾಲಿಬಾನ್ ಹೊತ್ತಿಲ್ಲ. ಆದರೆ ಕೃತ್ಯಗಳ ಹಿಂದೆ ತಾಲಿಬಾನ್ ಕೈವಾಡವಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.