ಸಿಯೋಲ್(ಉತ್ತರ ಕೊರಿಯಾ): ದೇಶದಲ್ಲಿ ತೀವ್ರವಾದ ಆಹಾರ ಬಿಕ್ಕಟ್ಟು ಎದುರಾಗಿದೆ. ಜನರು 2025 ರವರೆಗೆ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸುವಂತೆ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಮನವಿ ಮಾಡಿದ್ದಾರೆ.
2025ರೊಳಗೆ ಚೀನಾ ಜತೆಗಿನ ಗಡಿಯನ್ನು ಪುನಾರಂಭಿಸುವವರೆಗೆ ದೇಶದ ಜನರು ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸಬೇಕೆಂದು ಕಿಮ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಉತ್ತರ ಕೊರಿಯಾದ ಜನರಿಗೆ ಈಗಾಗಲೇ ಆಹಾರ ಕೊರತೆ ಎದುರಾಗಿದೆ. ಅದೇ ರೀತಿ ಇನ್ನೂ ಮೂರು ವರ್ಷಗಳ ಕಾಲ ಜನರು ತಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಿದೆ ಅವರು ಹೇಳಿದ್ದಾರೆ.
ಕೋವಿಡ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಉತ್ತರ ಕೊರಿಯಾ 2020ರ ಜನವರಿಯಲ್ಲಿ ಚೀನಾ ಜತೆಗೆ ಹೊಂದಿಕೊಂಡಿದ್ದ ಗಡಿಯನ್ನು ಮುಚ್ಚಿತ್ತು. ಆದರೆ ಉತ್ತರ ಕೊರಿಯಾದ ಈ ನಿರ್ಧಾರದಿಂದಾಗಿ ದೇಶದ ಆರ್ಥಿಕತೆ ಮೇಲೆ ಭಾರೀ ಪರಿಣಾಮ ಬೀರಿತ್ತು. ಅಷ್ಟೇ ಅಲ್ಲ, ದೇಶದಲ್ಲಿ ಪ್ರತಿದಿನ ದಿನಬಳಕೆ ವಸ್ತುಗಳ ಬೆಲೆಯೂ ಗಗನಕ್ಕೇರಿದೆ.
ಆಹಾರ ಬಿಕ್ಕಟ್ಟಿಗೆ ಕಾರಣವೇನು?
ಈಗಾಗಲೇ ಕೋವಿಡ್ನಿಂದ ತತ್ತರಿಸಿರುವ ಕೊರಿಯಾಗೆ ಇತ್ತೀಚೆಗೆ ಸುರಿದ ಭಾರಿ ಮಳೆಯು ದೊಡ್ಡ ಹೊಡೆತ ನೀಡಿದೆ. ಅತಿವೃಷ್ಟಿಯಿಂದಾಗಿ ಬೆಳೆಗಳು ನೆಲಕಚ್ಚಿದ್ದು, ಆಹಾರ ಬಿಕ್ಕಟ್ಟಿಗೆ ಕಾರಣವಾಗಿದೆ. ಹಣಕಾಸಿನ ಕೊರತೆಯಿಂದಾಗಿ ಹೊರ ದೇಶಗಳಿಂದಲೂ ಆಹಾರ ಸಾಮಗ್ರಿಗಳ ಪೂರೈಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಇದನ್ನೂ ಓದಿ: ಬಡ ರಾಷ್ಟ್ರ ಸುಡಾನ್ ಸೇನೆ ತೆಕ್ಕೆಗೆ: ಪ್ರಧಾನಿ ಬಂಧನ, 7 ಸಾವು, ತುರ್ತು ಪರಿಸ್ಥಿತಿ ಘೋಷಣೆ
ದೇಶದಲ್ಲಿನ ಆಹಾರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೃಷಿ ಉತ್ಪಾದನೆಯನ್ನು ಹೆಚ್ಚಳ ಮಾಡಲು ಮಾರ್ಗೋಪಾಯ ಕಂಡುಹಿಡಿಯಬೇಕೆಂದು ಕಿಮ್ ಮನವಿ ಮಾಡಿಕೊಂಡಿದ್ದಾರೆ.
ಕಿಮ್ ಯುದ್ಧೋನ್ಮಾದವೇ ದುಸ್ಥಿತಿಗೆ ಕಾರಣವೇ?
2020ರ ಅಂಕಿಅಂಶಗಳ ಪ್ರಕಾರ, ಉತ್ತರಕೊರಿಯಾದ ಜನಸಂಖ್ಯೆ 2.28 ಕೋಟಿ. ಇದು ನಮ್ಮ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಜನಸಂಖ್ಯೆಯಷ್ಟಿದೆ. ಇಷ್ಟು ಕಡಿಮೆ ಜನಸಂಖ್ಯೆ ಹೊಂದಿದ್ದರೂ, ಅವರಿಗೆ ಕನಿಷ್ಠ ಆಹಾರ ಒದಗಿಸಲು ಕಿಮ್ ಹೆಣಗಾಡುತ್ತಿದ್ದಾರೆ. ಈ ಗಂಭೀರ ಸಮಸ್ಯೆಗೆ ಕೇವಲ ಪ್ರವಾಹ, ಕೊರೊನಾ ಮಾತ್ರ ಕಾರಣವೇ ಅನ್ನೋ ಪ್ರಶ್ನೆ ಕೂಡ ಮೂಡುತ್ತದೆ.
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಶಸ್ತ್ರಾಸ್ತ್ರ, ಅಣುಬಾಂಬ್ಗಳ ತಯಾರಿಕೆಗೆ ಒತ್ತು ಕೊಡುವಷ್ಟು ದೇಶವಾಸಿಗಳತ್ತ ಗಮನಹರಿಸಲ್ಲ. ಅಮೆರಿಕ ಸೇರಿದಂತೆ ದೊಡ್ಡ ದೊಡ್ಡ ರಾಷ್ಟ್ರಗಳ ವಿರುದ್ಧ ಕೆಂಡ ಕಾರುತ್ತಿರುವ ಕಿಮ್, ಯುದ್ಧೋನ್ಮಾದದ ಮನಸ್ಥಿತಿಯಲ್ಲಿದ್ದಾರೆ. ದೇಶದಲ್ಲಿ ನ್ಯೂಕ್ಲಿಯರ್ ಬಾಂಬ್ಗಳು ಮಕ್ಕಳ ಆಟದ ಸಾಮಗ್ರಿಯಂತಾಗಿದ್ದು, ಹಲವಾರು ಪರಮಾಣು ಸ್ಥಾವರ ನಿರ್ಮಿಸಿ ಬಾಂಬ್ಗಳ ತಯಾರಿಕೆ ನಡೆಸುತ್ತಿದೆ. ಇಡೀ ವಿಶ್ವದಲ್ಲೇ ಉತ್ತರ ಕೊರಿಯಾದ ಆರ್ಥಿಕತೆ ಹಿನ್ನಡೆ ಅನುಭವಿಸುತ್ತಿದೆ. ಮಿಲಿಟರಿ ಮತ್ತು ಭದ್ರತೆ ಮೇಲೆ ಹೆಚ್ಚಿನ ಹಣ ವ್ಯಯಿಸುವುದರಿಂದ ಸಾಮಾನ್ಯ ಜನರು ಇಂದು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಈ ಹಿಂದೆಯೂ ಉಂಟಾಗಿದ್ದ ಆಹಾರ ಬಿಕ್ಕಟ್ಟು:
ಉತ್ತರ ಕೊರಿಯಾದಲ್ಲಿ ಆಹಾರ ಬಿಕ್ಕಟ್ಟು ಹೊಸತೇನಲ್ಲ. ಈ ಹಿಂದೆಯೂ ಅನೇಕ ಬಾರಿ ಆಹಾರ ಬಿಕ್ಕಟ್ಟನ್ನು ಎದುರಿಸಿದೆ. 1990ರಲ್ಲಿ ಉಂಟಾಗಿದ್ದ ಆಹಾರದ ಕೊರತೆಯಿಂದಾಗಿ ನೂರಾರು ಜನರು ಬಲಿಯಾಗಿದ್ದರು. ಸೋವಿಯತ್ ಒಕ್ಕೂಟದಿಂದ ಉತ್ತರ ಕೊರಿಯಾ ಹೊರಬಂದ ನಂತರ ಹಸಿವಿನಿಂದ ಅಂದಾಜು ಮೂರು ಮಿಲಿಯನ್ (30 ಲಕ್ಷ) ಜನ ಮೃತಪಟ್ಟರು ಎಂದು ಅಂದಾಜಿಸಲಾಗಿದೆ.