ನೈಪಿತಾವ್, ಮ್ಯಾನ್ಮಾರ್: ಸದ್ಯಕ್ಕೆ ಬಂಧನದಲ್ಲಿರುವ ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂಕಿ ಅವರಿಗೆ ಮತ್ತೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದ್ದು, ಸುಮಾರು 12 ರೀತಿಯ ಆರೋಪಗಳನ್ನು ಅವರು ಎದುರಿಸುತ್ತಿದ್ದಾರೆ.
ಆಂಗ್ ಸಾನ್ ಸೂಕಿ ವಿರುದ್ಧ ಸುಮಾರು ಹನ್ನೆರಡು ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, ಗರಿಷ್ಠ 100 ವರ್ಷಗಳಿಗಿಂತ ಹೆಚ್ಚು ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
11 ತಿಂಗಳ ಹಿಂದೆ ಮ್ಯಾನ್ಮಾರ್ನಲ್ಲಿ ನಡೆದ ಸೇನಾ ದಂಗೆಯಲ್ಲಿ ಅವರು ಬಂಧನಕ್ಕೆ ಒಳಗಾಗಿದ್ದರು. 2021ರ ಫೆಬ್ರವರಿ ತಿಂಗಳಲ್ಲಿ ಸೇನಾ ದಂಗೆ ನಡೆದಿದ್ದು, ಈ ವೇಳೆ ಅಲ್ಲಿ ಪ್ರಜಾಪ್ರಭುತ್ವ ಸರ್ಕಾರವನ್ನು ಹತ್ತಿಕ್ಕಿ, ಸೇನೆ ಅಧಿಕಾರ ವಹಿಸಿಕೊಂಡಿತ್ತು.
2020ರ ಚುನಾವಣಾ ಪ್ರಚಾರದ ಸಮಯದಲ್ಲಿ ಕೋವಿಡ್ ಮಾರ್ಗಸೂಚಿಗಳ ಉಲ್ಲಂಘನೆ, ಮಾರ್ಗಸೂಚಿಗಳ ಉಲ್ಲಂಘನೆಗೆ ಪ್ರಚೋದನೆ, ಅಕ್ರಮವಾಗಿ ವಾಕಿ-ಟಾಕಿಗಳನ್ನು ಆಮದು ಮಾಡಿಕೊಳ್ಳುವುದು, ಪರವಾನಗಿ ಪಡೆಯದ ವಾಕಿಟಾಕಿಗಳ ಬಳಕೆಯ ಆರೋಪಗಳು ಸೂಕಿ ಮೇಲಿವೆ.
ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ನೈಸರ್ಗಿಕ ವಿಪತ್ತು ನಿರ್ವಹಣಾ ಕಾನೂನು ಅಡಿಯಲ್ಲಿ ಎರಡು ವರ್ಷಗಳ ಶಿಕ್ಷೆ, ಮ್ಯಾನ್ಮಾರ್‌ನ ರಫ್ತು-ಆಮದು ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಎರಡು ವರ್ಷ ಶಿಕ್ಷೆಯನ್ನು ವಿಧಿಸಲಾಗಿದೆ.
ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಒಂಟೆ ಸೌಂದರ್ಯ ಸ್ಪರ್ಧೆ: ಇದೇ ಮೊದಲ ಬಾರಿಗೆ ಮಹಿಳೆಯರು ಎಂಟ್ರಿ