ಕರಾಚಿ: ಪಾಕಿಸ್ತಾನದ ನೈಋತ್ಯ ಪ್ರಾಂತ್ಯದ ಬಲೂಚಿಸ್ತಾನದಲ್ಲಿ ಪ್ಯಾರಾ ಮಿಲಿಟರಿ ಪಡೆಗಳ ಬೆಂಗಾವಲಿನಲ್ಲಿದ್ದ ತೈಲ ಮತ್ತು ಅನಿಲ ಕಾರ್ಮಿಕರ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದು, 7 ಸೈನಿಕರು ಸೇರಿದಂತೆ 14 ಜನರು ಸಾವನ್ನಪ್ಪಿದ್ದಾರೆ.
ಗ್ವಾದರ್ ಜಿಲ್ಲೆಯ ಒರ್ಮಾರಾ ಪಟ್ಟಣದಲ್ಲಿ ಸರ್ಕಾರಿ ತೈಲ ಮತ್ತು ಅನಿಲ ಅಭಿವೃದ್ಧಿ ಕಂಪನಿ ಲಿಮಿಟೆಡ್ (ಒಜಿಡಿಸಿಎಲ್) ಕಾರ್ಮಿಕರ ಮೇಲೆ ಗುರುವಾರ ಈ ದಾಳಿ ನಡೆಸಲಾಗಿದೆ.
ಗುಂಡಿನ ಚಕಮಕಿಯಲ್ಲಿ ಉಗ್ರರು ಕೂಡ ಭಾರಿ ನಷ್ಟ ಅನುಭವಿಸಿದ್ದಾರೆ. ಈ ದಾಳಿಯಲ್ಲಿ ಏಳು ಫ್ರಾಂಟಿಯರ್ ಕಾರ್ಪ್ಸ್ (ಎಫ್‌ಸಿ) ಸೈನಿಕರು ಮತ್ತು ಏಳು ಖಾಸಗಿ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗವಾದ ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್ಪಿಆರ್) ದೃಢಪಡಿಸಿದೆ.
ಇದು ಯೋಜಿತ ದಾಳಿ, ಉಗ್ರರು ಕರಾಚಿಗೆ ಹೋಗುವ ಬೆಂಗಾವಲು ಪಡೆ ಬಗ್ಗೆ ಮೊದಲೇ ಮಾಹಿತಿ ಹೊಂದಿದ್ದಾರೆ ಎಂದು ತಿಳಿಸಿದೆ. ಪ್ರಧಾನಿ ಇಮ್ರಾನ್ ಖಾನ್ ದಾಳಿಯನ್ನು ಖಂಡಿಸಿದ್ದು, ಘಟನೆಯ ಬಗ್ಗೆ ವರದಿ ಕೋರಿದ್ದಾರೆ ಎಂದು ರೇಡಿಯೋ ಪಾಕಿಸ್ತಾನ ಹೇಳಿದೆ.