ಟೆಹ್ರಾನ್: ಇಸ್ಲಾಮಿಕ್ ರಿಪಬ್ಲಿಕ್ನ ಪರಮಾಣು ಕಾರ್ಯಕ್ರಮದ ವಿವರಗಳನ್ನು ಅಮೆರಿಕಾದ ಕೇಂದ್ರ ಗುಪ್ತಚರ ಸಂಸ್ಥೆ (CIA)ಯೊಂದಿಗೆ ಹಂಚಿಕೊಂಡ ಗೂಢಾಚಾರಿಗೆ ಇರಾನ್ನ ಉನ್ನತ ನ್ಯಾಯಾಲಯವು ಮರಣದಂಡನೆ ಶಿಕ್ಷೆ ನೀಡುವುದಾಗಿ ಘೋಷಿಸಿದೆ.
ಅಮೀರ್ ರಹಿಂಪೂರ್ ಎಂಬ ವ್ಯಕ್ತಿಯು ಹೀಗೆ ಸಿಐಎ ಜೊತೆ ಮಾಹಿತಿ ಹಂಚಿಕೊಂಡಿರುವುದಾಗಿ ಆರೋಪಿಸಿ ಸರ್ಕಾರಿ ಸ್ವಾಮ್ಯದ ಸುದ್ದಿ ವಾಹಿನಿ ವರದಿ ಮಾಡಿದ್ದು, ಆತನನ್ನು ಶೀಘ್ರದಲ್ಲೇ ಗಲ್ಲಿಗೇರಿಸಲಾಗುವುದು ಎಂದು ಇರಾನ್ನ ನ್ಯಾಯಾಂಗ ವಕ್ತಾರ ಘೋಲಂ ಹೊಸೈನ್ ಇಸ್ಮಾಯಿಲಿ ತಿಳಿಸಿದ್ದಾರೆ. ಆದರೆ ರಹಿಂಪೂರ್ ಕುರಿತ ಯಾವುದೇ ಮಾಹಿತಿಯನ್ನು ನೀಡಿಲ್ಲ.
ಇರಾನ್ನ ಪರಮಾಣು ಕಾರ್ಯಕ್ರಮದ ಕುರಿತ ವಿವರಗಳನ್ನು ನೀಡಲು ಸಿಐಎಯಿಂದ ರಹಿಂಪೂರ್ ಸಾಕಷ್ಟು ಹಣ ಪಡೆದಿದ್ದು, ಅಮೆರಿಕಾದ ಈ ಗುಪ್ತಚರ ಸಂಸ್ಥೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದನು ಎಂದು ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆಯಾದ IRNA ವರದಿ ಮಾಡಿತ್ತು.
ಸಿಐಎಗೆ ಗೂಢಾಚಾರಿಯಾಗಿ ಕೆಲಸ ಮಾಡಿರುವ ಇನ್ನಿಬ್ಬರು ವ್ಯಕ್ತಿಗಳಿದ್ದು, ಬೇಹುಗಾರಿಕೆ ನಡೆಸಿದ್ದಕ್ಕೆ ಅವರಿಗೆ 10 ವರ್ಷಗಳು ಹಾಗೂ ರಾಷ್ಟ್ರೀಯ ಭದ್ರತೆಗೆ ವಿರುದ್ಧವಾಗಿ ಕಾರ್ಯ ನಿರ್ವಹಿಸಿದ್ದಕ್ಕೆ 5 ವರ್ಷಗಳು ಸೇರಿ ಒಟ್ಟು 15 ವರ್ಷಗಳ ಜೈಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ನೀಡಿದೆ ಎಂದು ಇಸ್ಮಾಯಿಲಿ ತಿಳಿಸಿದ್ದಾರೆ.
ಇರಾನ್ನ ಕಮಾಂಡರ್ ಕಾಸಿಮ್ ಸುಲೇಮಾನಿ ಹತ್ಯೆ ಹಾಗೂ ಟೆಹ್ರಾನ್ನ ಪರಮಾಣು ಒಪ್ಪಂದವನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂಪಡೆದ ಬಳಿಕ ಇರಾನ್ ಹಾಗೂ ಅಮೆರಿಕಾ ನಡುವೆ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.