ನವದೆಹಲಿ: ಮಾರಿಷಸ್‌ನ ಹಡಗೊಂದರಲ್ಲಿ ಉಂಟಾದ ತೈಲ ಸೋರಿಕೆಯನ್ನು ತಡೆಗಟ್ಟುವ ಪ್ರಯತ್ನಕ್ಕೆ ಸಹಾಯ ಮಾಡಲು ಭಾರತೀಯ ನೌಕಾಪಡೆಯ ವಿಶೇಷ ಡೈವಿಂಗ್ ಹಡಗು ಐಎನ್ಎಸ್ ನಿರೀಕ್ಷಕ್ ಮಾರಿಷಸ್‌ನ ಪೋರ್ಟ್ ಲೂಯಿಸ್ ತಲುಪಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.
"ವಿಶೇಷ ಡೈವಿಂಗ್ ಸಪೋರ್ಟ್ ವೆಸೆಲ್, ಐಎನ್ಎಸ್ ನಿರೀಕ್ಷಕ್ ಆಗಸ್ಟ್ 24, 2020 ರಂದು ಮಾರಿಷಸ್‌ನ ಪೋರ್ಟ್ ಲೂಯಿಸ್ ತಲುಪಿದೆ. ಅಲ್ಲಿನ ತೈಲ ಸೋರಿಕೆಯನ್ನು ತಡೆಗಟ್ಟಲು ಈ ಹಡಗು ನೆರವು ನೀಡಬಹುದು. ಅಲ್ಲದೆ ಇದು ವಕಾಶಿಯೋ ಧ್ವಂಸಗೊಂಡ ಬಳಿಕ ಅಲ್ಲಿಗೆ ಕಡಲ ಭದ್ರತೆ ಹಾಗೂ ವೈದ್ಯಕೀಯ ರಕ್ಷಣೆಯನ್ನು ಒದಗಿಸುತ್ತದೆ" ಎಂದು ನೌಕಾಪಡೆಯ ವಕ್ತಾರರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಎಂವಿ ವಕಾಶಿಯೊ ಶಿಪ್ನಲ್ಲಿ ಉಂಟಾದ ತೈಲ ಸೋರಿಕೆಯ ಅವಘಡವನ್ನು ನಿರ್ವಹಿಸಲು ಹಾಗೂ ನೆರವು ನೀಡಲು ಭಾರತದಿಂದ ತಾಂತ್ರಿಕ ಪ್ರತಿಕ್ರಿಯೆ ತಂಡದ ಜೊತೆಗೆ ಸುಮಾರು 30 ಟನ್ನಷ್ಟು ವಿಶೇಷ ಮಾಲಿನ್ಯ ನಿಯಂತ್ರಣ ಸಾಧನಗಳನ್ನು ವಿತರಿಸಿದೆ ಎಂದು ವಕ್ತಾರರು ಹೇಳಿದರು.
ಅಷ್ಟೇ ಅಲ್ಲದೆ, ಮಾರಿಷಸ್‌ಗೆ ತೈಲ ಸೋರಿಕೆಯ ನಿಯಂತ್ರಣ ಹಾಗೂ ರಕ್ಷಣಾ ಕಾರ್ಯಾಚರಣೆಗಳಲ್ಲಿ ಸಹಾಯ ಮಾಡಲು 10 ಸದಸ್ಯರುಳ್ಳ ತಾಂತ್ರಿಕ ತಂಡದೊಂದಿಗೆ ಐಎಎಫ್ ವಿಮಾನಗಳನ್ನು ಸಹ ಕಳುಹಿಸಿದೆ. ಅದರೊಂದಿಗೆ ಮಾರಿಷಸ್ ಪ್ರಯತ್ನಗಳಿಗೆ ಪೂರಕವಾಗಿ ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ)ನ 10 ತಜ್ಞರನ್ನೊಳಗೊಂಡ ತಂಡವನ್ನೂ ಕಳುಹಿಸಿದೆ.
ಮಾರಿಷಸ್ ಕರಾವಳಿಯಲ್ಲಿ ಹಡಗಿನಲ್ಲಿ ಸೋರಿಕೆ ಉಂಟಾಗಿ ಟನ್ಗಟ್ಟಲೇ ತೈಲ ಸೋರಿಕೆಯಾಗಿತ್ತು. ಆ ಹಡಗು ಸದ್ಯ ವಿಭಜನೆಯಾಗಿದೆ ಎಂದು ಅಧಿಕಾರಿಗಳು ಆಗಸ್ಟ್ 16 ರಂದು ಮಾಧ್ಯಮ ವರದಿಯಲ್ಲಿ ತಿಳಿಸಿದ್ದಾರೆ. ಸಂಜೆ 4:30 ರ ಸುಮಾರಿಗೆ, ಹಡಗಿನ ಫಾರ್ವರ್ಡ್ ವಿಭಾಗದಲ್ಲಿ ಬೇರ್ಪಡುವಿಕೆಯಾಗಿರುವುದನ್ನು ಗಮನಿಸಲಾಗಿದೆ" ಎಂದು ಮಾರಿಷಸ್‌ನ ರಾಷ್ಟ್ರೀಯ ವಿಪತ್ತು ಸಮಿತಿಯು ಹೇಳಿಕೆಯಲ್ಲಿ ಉಲ್ಲೇಖಿಸಿದೆ.